ಬೆಂಗಳೂರು : ದೇಶದ ಜನತೆ ಕಾಂಗ್ರೆಸ್ ಪಕ್ಷದ ಮೇಲಿದ್ದ ವಿಶ್ವಾಸವನ್ನು ಯಾಕೆ ಕಳೆದುಕೊಂಡಿದ್ದಾರೆ ಎಂದು ಚರ್ಚಿಸಬೇಕೇ ವಿನಃ ವಿದ್ಯುನ್ಮಾನ ಮತಯಂತ್ರದ(ಇವಿಎಂ) ಬಗ್ಗೆ ಅವರು(ಕಾಂಗ್ರೆಸ್) ಪ್ರಶ್ನಿಸುತ್ತಿರುವುದು ಮುರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಆಕ್ರೋಶ ಹೊರ ಹಾಕಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿ ಅವರಿಂದ ಮಾತ್ರ ಭಾರತವನ್ನು ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಜನ ಒಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದೆ ಪ್ರಸ್ತುತ ಇವಿಎಂ ಮೇಲೆ ದೂರುವುದು ಹುಚ್ಚುತನ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯನವರಿಗೆ ಇವಿಎಂ ಮೇಲೆ ಯಾಕೆ ವಿಶ್ವಾಸ ಕಡಿಮೆಯಾಗಿದೆ. ರಾಹುಲ್ ಗಾಂಧಿಯವರು ಸತತವಾಗಿ 3 ಬಾರಿ ಕೇಂದ್ರ ಲೋಕಸಭಾ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಮತಪತ್ರಕ್ಕೆ ಹೆದರುವುದಿಲ್ಲ, ನಾವು ಯಾಕೆ ಹೆದರಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗೆ ಇವಿಎಂ ಬಗ್ಗೆ ಸಮಸ್ಯೆ ಇದ್ದರೆ ಕಾಂಗ್ರೆಸ್ ಪಕ್ಷ ಹಿಮಾಚಲ ಪ್ರದೇಶದಲ್ಲಿ, ತೆಲಂಗಾಣ ರಾಜ್ಯದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಅಧಿಕಾರಕ್ಕೆ ಬಂತು. ಆ ಸಮಯದಲ್ಲಿ ಇವಿಎಂ ಸಮಸ್ಯೆ ಇರಲಿಲ್ಲವೇ? ಬ್ಯಾಲೆಟ್ ಪೇಪರ್ ಬೇಕು ಅನ್ನಿಸಲಿಲ್ಲವೇ? ಎಂದು ಅವರು ಕೇಳಿದ್ದಾರೆ.
ಕಾಂಗ್ರೆಸ್ಸಿನವರು ಎಲ್ಲದರಲ್ಲೂ ವಿರೋಧವನ್ನು ಮಾಡುತ್ತಿದ್ದಾರೆ. ವಕ್ಫ್ ಬೋರ್ಡ್ ಬಗ್ಗೆ ಹೋರಾಟ ಮಾಡಿದರೆ ಅದನ್ನು ವಿರೋಧಿಸಿದರು, ಅರ್ಟಿಕಲ್ 370 ಬಗ್ಗೆ ವಿರೋಧ ವ್ಯಕ್ತಪಡಿಸಿದರು, ಒಂದು ದೇಶ ಒಂದು ಚುನಾವಣೆಯನ್ನು ವಿರೋಧ ಮಾಡಿದರು. ಅದೇ ರೀತಿ ಇವಿಎಂ ಅನ್ನು ವಿರೋಧ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.