ನವದೆಹಲಿ: ಹೋಟೆಲ್ ಹಾಗೂ ಲಾಡ್ಜಿಂಗ್ ಉದ್ಯಮದಲ್ಲಿ ದೇಶಾದ್ಯಂತ ಖ್ಯಾತಿ ಗಳಿಸಿರುವ ಓಯೋ ಕಂಪನಿ ಈಗ ಭಾರಿ ವಿವಾದಕ್ಕೆ ಸಿಲುಕಿದೆ. ಓಯೋ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಯ್ಕಾಟ್ ಓಯೋ (Boycott OYO) ಎಂದು ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ಶುರುವಾಗಿದೆ. ದೇವರ ವಿಚಾರಕ್ಕೆ ಸಂಬಂಧಿಸಿದಂತೆ ಓಯೋ ಕಂಪನಿ ನೀಡಿದ ಒಂದು ಜಾಹೀರಾತು ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿದೆ.
ಏನಿದು ವಿವಾದ?
ದೇಶದ ಬಹುತೇಕ ಧಾರ್ಮಿಕ ನಗರಗಳಲ್ಲಿ ಓಯೋ ಹೋಟೆಲ್ ಗಳಿವೆ. ವಾರಾಣಸಿ, ಅಯೋಧ್ಯೆ, ಮಥುರಾ ಸೇರಿ ಬಹುತೇಕ ಧಾರ್ಮಿಕ ಸ್ಥಳಗಳಲ್ಲಿ ಹೋಟೆಲ್ ಗಳನ್ನು ಹೊಂದಿದೆ. ಇದರ ಭಾಗವಾಗಿಯೇ ಪತ್ರಿಕೆಯಲ್ಲಿ ಓಯೋ ಜಾಹೀರಾತು ನೀಡಿದೆ. “ದೇವರು ಎಲ್ಲ ಕಡೆಯೂ ಇದ್ದಾನೆ. ಅಲ್ಲೆಲ್ಲ ಓಯೋ ಕೂಡ ಇದೆ” ಎಂಬ ಶೀರ್ಷಿಕೆಯಡಿಯಲ್ಲಿ ಜಾಹೀರಾತು ನೀಡಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಯುವ ಜೋಡಿಗಳು ತಂಗುವ ತಾಣವಾಗಿ ಓಯೋ ಬದಲಾಗಿರುವುದು ಬಹಿರಂಗ ಸತ್ಯವಾಗಿದೆ. ಹೀಗಿರುವಾಗ ಓಯೋ ಕಂಪನಿಯನ್ನು ದೇವರ ಜತೆಗೆ ಹೋಲಿಸುವುದು ಸರಿಯಲ್ಲ. ಇದು ಹಿಂದೂ ದೇವರಿಗೆ ಮಾಡಿದ ಅವಮಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಗಾಗಿಯೇ, ಬಾಯ್ಕಾಟ್ ಓಯೋ ಅಭಿಯಾನ ಆರಂಭವಾಗಿದೆ. ಹಾಗೆಯೇ, ಓಯೋ ಲೋಗೊ ಕೂಡ ಹಿಂದೂ ದೇವರಿಗೆ ಅವಮಾನ ಮಾಡುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ ಎಂದು ಜನಾಕ್ರೋಶ ವ್ಯಕ್ತವಾಗಿದೆ.
ಓಯೋ ಸ್ಪಷ್ಟನೆ ಏನು?
ಪತ್ರಿಕೆಯ ಜಾಹೀರಾತು ಕುರಿತು ಆಕ್ರೋಶ ವ್ಯಕ್ತವಾಗುತ್ತಲೇ ಓಯೋ ಸ್ಪಷ್ಟನೆ ನೀಡಿದೆ. “ನಾವು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ದಿಸೆಯಲ್ಲಿ ಜಾಹೀರಾತು ನೀಡಿದ್ದೇವೆಯೇ ಹೊರತು, ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಅಲ್ಲ” ಎಂದು ಸ್ಪಷ್ಟಪಡಿಸಿದೆ. “ನಮ್ಮ ದೇಶದ ಸಾಂಸ್ಕೃತಿಕ ಸಿರಿವಂತಿಕೆ, ಧಾರ್ಮಿಕ ನಂಬಿಕೆಗಳ ಮೇಲೆ ನಮಗೆ ಅಪಾರ ಗೌರವವಿದೆ” ಎಂದೂ ತಿಳಿಸಿದೆ.