ನವದೆಹಲಿ : ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ “ವೋಟ್ ಚೋರಿ”(ಮತಗಳ್ಳತನ)ಯಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಚುನಾವಣಾ ಆಯೋಗದ ಮೂಲಗಳು ಪ್ರತಿಕ್ರಿಯಿಸಿವೆ. “ಯಾವುದೇ ವ್ಯಕ್ತಿ ಎರಡು ಬೂತ್‌ಗಳಲ್ಲಿ 200ಕ್ಕೂ ಹೆಚ್ಚು ಬಾರಿ ಮತ ಚಲಾಯಿಸಿದ್ದೇ ಆದಲ್ಲಿ, ಕಾಂಗ್ರೆಸ್‌ನ ಪೋಲಿಂಗ್ ಏಜೆಂಟ್‌ಗಳು ಮತದಾನದ ಸಮಯದಲ್ಲಿ ಏಕೆ ಆಕ್ಷೇಪ ಎತ್ತಲಿಲ್ಲ?” ಎಂದು ಆಯೋಗದ ಮೂಲಗಳು ಪ್ರಶ್ನಿಸಿವೆ. ಇಂತಹ ಗಂಭೀರ ಆರೋಪಗಳನ್ನು ಮತಗಟ್ಟೆಗಳಲ್ಲಿ ತಕ್ಷಣವೇ ಪ್ರಸ್ತಾಪಿಸಬೇಕಿತ್ತು ಎಂದು ಹೇಳಿವೆ.
‘ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಲಾಗಿತ್ತು’
ರಾಹುಲ್ ಆರೋಪದ ಕುರಿತು ಚುನಾವಣಾ ಆಯೋಗದ ಮೂಲಗಳು ಮತ್ತಷ್ಟು ಸ್ಪಷ್ಟನೆ ನೀಡಿದ್ದು, “ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ, ಅದರ ಪ್ರತಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲಾಗಿತ್ತು. ಆ ಸಮಯದಲ್ಲಿ ನಕಲಿ ಹೆಸರುಗಳ ಬಗ್ಗೆ ಏಕೆ ಪ್ರಶ್ನೆಗಳನ್ನು ಎತ್ತಲಿಲ್ಲ? ನಕಲಿ ಮತದಾರರ ಬಗ್ಗೆ ಏಕೆ ಯಾವುದೇ ಮನವಿ ಸಲ್ಲಿಸಲಿಲ್ಲ?” ಎಂದು ಕೇಳಿವೆ. ಅಲ್ಲದೇ, ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ನಿಗದಿತ ನಿಯಮಗಳನ್ನು ಪಾಲಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಆರೋಪವೇನು?
ಬುಧವಾರ ಪತ್ರಿಕಾಗೋಷ್ಠಿ ನಡೆಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ “25 ಲಕ್ಷ ಮತಗಳ್ಳತನ”ವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬ್ರೆಜಿಲ್ ಮೂಲದ ಮಾಡೆಲ್ ಒಬ್ಬರ ಫೋಟೋವನ್ನು ಬಳಸಿ 22 ಬಾರಿ ಮತ ಚಲಾಯಿಸಲಾಗಿದೆ. ಒಂದೇ ಫೋಟೋ ಬಳಸಿಕೊಂಡು ಸೀಮಾ, ಸರಸ್ವತಿ, ಸ್ವೀಟಿ, ರಶ್ಮಿ, ವಿಲ್ಮಾ ಎಂಬ ಬೇರೆ ಬೇರೆ ಹೆಸರುಗಳಿಂದ ಹಕ್ಕು ಚಲಾಯಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಹರ್ಯಾಣದಲ್ಲಿ ಕಾಂಗ್ರೆಸ್ ಗೆಲುವು ನಿಚ್ಚಳವಾಗಿತ್ತು. ಆದರೆ, ಕಾಂಗ್ರೆಸ್‌ನ ಗೆಲುವನ್ನು ಸೋಲಾಗಿ ಪರಿವರ್ತಿಸಲು ವ್ಯವಸ್ಥಿತ ಸಂಚು ನಡೆದಿದೆ. ಬಿಜೆಪಿ ನಡೆಸಿದ ಈ ಸಂಚಿನಲ್ಲಿ ಚುನಾವಣಾ ಆಯೋಗ ಕೈಜೋಡಿಸಿತ್ತು ಎಂದು ಅವರು ಆರೋಪಿಸಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ಮೂಲಗಳು, ಮತದಾರರ ಪಟ್ಟಿ ಸಿದ್ಧವಾದಾಗ ರಾಜಕೀಯ ಪಕ್ಷಗಳಿಗೆ ಆಕ್ಷೇಪಣೆ ಸಲ್ಲಿಸಲು ಸಾಕಷ್ಟು ಅವಕಾಶವಿತ್ತು, ಆದರೆ ಆ ಸಮಯದಲ್ಲಿ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಸುಖಾಸುಮ್ಮನೆ ಆರೋಪ ಮಾಡುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ : ಮಂಡ್ಯ ಡಿಸಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಿಸದೆ ಸಾವು!


















