ಬೆಂಗಳೂರು: ರಾಜ್ಯಕ್ಕೆ ಬೇಸಿಗೆ ಕಾಲಿಟ್ಟು, ಇಡೀ ಭೂಮಿ ಬೆಂಕಿಯಾಗುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಹೀಗಾಗಿ ಬೇಸಿಗೆ ಮುಗಿಯುವವರೆಗೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳ ವಕೀಲರಿಗೆ ಕಪ್ಪು ಕೋಟ್ ಧರಿಸುವುದರಿಂದ ವಿನಾಯಿತಿ ನೀಡಬೇಕೆಂದು ಬೆಂಗಳೂರು ವಕೀಲರ ಸಂಘ ಕೋರಿದೆ.
ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾಗೆ ಪತ್ರ ಬರೆದಿದ್ದಾರೆ. ಬೇಸಿಗೆಯ ಬಿಸಿಲಿನಿಂದಾಗಿ ನೆರೆಯ ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಕಪ್ಪು ಕೋಟ್ ನಿಂದ ವಕೀಲರಿಗೆ ವಿನಾಯಿತಿ ನೀಡಲಾಗಿದೆ. ಹೀಗಾಗಿ ರಾಜ್ಯದಲ್ಲಿಯೂ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
‘ಹವಾನಿಯಂತ್ರಿತ ವ್ಯವಸ್ಥೆ ಇಲ್ಲದಿರುವುದರಿಂದ ವಕೀಲರು ಬಿಳಿ ವಸ್ತ್ರದ ಮೇಲೆ ಕಪ್ಪು ಕೋಟ್ ಮತ್ತು ಬ್ಯಾಂಡ್ ಹಾಕುವುದು ಕಷ್ಟವಾಗುತ್ತಿದೆ. ಹೀಗಾಗಿ ಬೇಸಿಗೆ ರಜೆ ಮುಗಿದು ಕೋರ್ಟ್‌ಗಳು ಪುನರಾರಂಭ ಆಗುವವರೆಗೆ ಕಪ್ಪು ಕೋಟ್ ಧರಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅಲ್ಲದೆ, ಕೆಲ ತಿಂಗಳು ವಾತಾವರಣದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಅಲ್ಲದೇ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾ.12 ರಿಂದ ಮಾ.15ರ ಅವಧಿಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.