ನವದೆಹಲಿ: ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು (ಡಿ.08) ಲೋಕಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಚರ್ಚೆಗೆ ಚಾಲನೆ ನೀಡಲಿದ್ದು, ಈ ವೇಳೆ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ‘ವಂದೇ ಮಾತರಂ’ ಕುರಿತಾದ ಐತಿಹಾಸಿಕ ಮತ್ತು ರಾಜಕೀಯ ವಾಕ್ಸಮರ ನಡೆಯುವ ಸಾಧ್ಯತೆಯಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಚರ್ಚೆಯ ಕೊನೆಯಲ್ಲಿ ಮಾತನಾಡಲಿದ್ದಾರೆ. ಲೋಕಸಭೆಯಲ್ಲಿ ಎನ್ಡಿಎ ಸರ್ಕಾರಕ್ಕೆ ಮೂರು ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಒಟ್ಟಾರೆ 10 ಗಂಟೆಗಳ ಚರ್ಚೆಗೆ ಸಮಯ ನಿಗದಿಪಡಿಸಲಾಗಿದೆ. ಮಂಗಳವಾರ ರಾಜ್ಯಸಭೆಯಲ್ಲೂ ಈ ಕುರಿತು ಚರ್ಚೆ ನಡೆಯಲಿದೆ.
ನೆಹರೂ ವಿರುದ್ಧ ಬಿಜೆಪಿ ವಾಗ್ದಾಳಿ
ಸಂಸತ್ತಿನ ಚರ್ಚೆಗೂ ಮುನ್ನವೇ ಬಿಜೆಪಿ ಸಂಸದ ಸಂಬಿತ್ ಪಾತ್ರ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ವಂದೇ ಮಾತರಂ ಅರ್ಥ ಮಾಡಿಕೊಳ್ಳಲು ಯಾರಿಗಾದರೂ ನಿಘಂಟು ಬೇಕಿದ್ದರೆ, ಅವರು ಪರಂಪರೆಯನ್ನು ನಿರ್ಮಿಸುವವರಲ್ಲ,” ಎಂದು ವ್ಯಂಗ್ಯವಾಡಿರುವ ಪಾತ್ರ, ನೆಹರು ಅವರು ಮುಸ್ಲಿಮರನ್ನು ಓಲೈಸುವ ಸಲುವಾಗಿ ಈ ಗೀತೆಯನ್ನು ವಿರೋಧಿಸಿದ್ದರು ಎಂದು ಆರೋಪಿಸಿದ್ದಾರೆ. “ವಂದೇ ಮಾತರಂ ಮುಸ್ಲಿಮರಿಗೆ ಕಿರಿಕಿರಿ ಉಂಟುಮಾಡುತ್ತದೆ ಎಂಬ ನೆಹರು ಅವರ ಹೇಳಿಕೆ, ಅವರ ಸುಳ್ಳು ಜಾತ್ಯತೀತತೆಯ ಪರಿಕಲ್ಪನೆಯನ್ನು ತೋರಿಸುತ್ತದೆ,” ಎಂದು ಸಂಬಿತ್ ಪಾತ್ರ ಟೀಕಿಸಿದ್ದಾರೆ.
ನೆಹರೂ ಅವರ ನೈಜ ನಿಲುವೇನಿತ್ತು?
ಇತಿಹಾಸದ ಪುಟಗಳನ್ನು ಗಮನಿಸಿದರೆ, ಜವಾಹರಲಾಲ್ ನೆಹರೂ ಅವರು ‘ವಂದೇ ಮಾತರಂ’ ಅನ್ನು “ಭಾರತದ ಪ್ರಮುಖ ರಾಷ್ಟ್ರೀಯ ಗೀತೆ” ಎಂದು ಕರೆದಿದ್ದರೂ, ಅದನ್ನು ರಾಷ್ಟ್ರಗೀತೆಯಾಗಿ (National Anthem) ಆಯ್ಕೆ ಮಾಡಲು ಕೆಲವು ತಾಂತ್ರಿಕ ಕಾರಣಗಳನ್ನು ನೀಡಿದ್ದರು:
ಆರ್ಕೆಸ್ಟ್ರಾ ಮತ್ತು ಬ್ಯಾಂಡ್: ರಾಷ್ಟ್ರಗೀತೆಯು ಹಾಡುವುದಕ್ಕಿಂತ ಹೆಚ್ಚಾಗಿ ಆರ್ಕೆಸ್ಟ್ರಾ ಮತ್ತು ಬ್ಯಾಂಡ್ಗಳಲ್ಲಿ ನುಡಿಸಲು ಯೋಗ್ಯವಾಗಿರಬೇಕು. ‘ಜನ ಗಣ ಮನ’ ಇದಕ್ಕೆ ಸೂಕ್ತವಾಗಿದೆ, ಆದರೆ ‘ವಂದೇ ಮಾತರಂ’ನ ರಾಗ ಸಂಯೋಜನೆ ಬ್ಯಾಂಡ್ಗಳಲ್ಲಿ ನುಡಿಸಲು ಕಷ್ಟಕರ ಎಂದು ನೆಹರು ಅಭಿಪ್ರಾಯಪಟ್ಟಿದ್ದರು.
ವಿದೇಶಿಯರ ಗ್ರಹಿಕೆ: ‘ವಂದೇ ಮಾತರಂ’ ವಿದೇಶಿಯರಿಗೆ ಅರ್ಥವಾಗುವ ಅಥವಾ ಆಕರ್ಷಿಸುವ ರಾಗವನ್ನು ಹೊಂದಿಲ್ಲ ಎಂಬುದು ಅವರ ವಾದವಾಗಿತ್ತು.
ಭಾಷೆ: ‘ವಂದೇ ಮಾತರಂ’ನ ಭಾಷೆ ಸಾಮಾನ್ಯ ಜನರಿಗೆ ಅರ್ಥಮಾಡಿಕೊಳ್ಳಲು ಕಷ್ಟ, ಆದರೆ ‘ಜನ ಗಣ ಮನ’ ಸರಳವಾಗಿದೆ ಎಂದು ಅವರು ಹೇಳಿದ್ದರು.
ಮುಸ್ಲಿಮರ ಆಕ್ಷೇಪ: ಕೆಲವು ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ನಿಜ. ಹಾಗೆಂದು ರಾಷ್ಟ್ರಗೀತೆಯ ಆಯ್ಕೆಯಲ್ಲಿ ಅದುವೇ ಪ್ರಮುಖ ಕಾರಣವಾಗಿರಲಿಲ್ಲ ಎಂದು ನೆಹರೂ ಸ್ಪಷ್ಟಪಡಿಸಿದ್ದರು.
ಬಿಜೆಪಿ ವಿರುದ್ಧ ಸಿಪಿಐ ಕಿಡಿ
ಇದೇ ವೇಳೆ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, “ಬಿಜೆಪಿ ಮತ್ತು ಆರ್ಎಸ್ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ಈಗ ಅವರು ‘ವಂದೇ ಮಾತರಂ’ ಹೆಸರಿನಲ್ಲಿ ಇತಿಹಾಸವನ್ನು ತಿರುಚಲು ಮತ್ತು ತಮ್ಮ ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: “ನಮ್ಮನ್ನು ಕ್ಷಮಿಸಿ” : ಪ್ರಯಾಣಿಕರ ಎದುರು ಮನಬಿಚ್ಚಿ ಮಾತನಾಡಿದ ಇಂಡಿಗೋ ಪೈಲಟ್: ವಿಡಿಯೋ ವೈರಲ್!



















