ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ನೇಮಕವಾಗಿದ್ದಾರೆ. ಇದರ ಬೆನ್ನಲ್ಲಿಯೇ ಈಗ ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಗಂಭೀರ್ ಸಾರಥ್ಯದಲ್ಲಿ ಕೆಎಲ್ ರಾಹುಲ್ (KL Rahul) ನಾಯಕರಾಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಗಂಭೀರ್ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಸರಣಿಗೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಲಿದ್ದಾರೆ. ಹೀಗಾಗಿ ಈ ತಂಡ ನಾಯಕರಾಗಿ ಕೆ.ಎಲ್. ರಾಹುಲ್ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರೋಹಿತ್ ಶರ್ಮಾ ಹೊರಗುಳಿದರೆ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಸದ್ಯದ ಉತ್ತರ ಕೆಎಲ್ ರಾಹುಲ್ ಎನ್ನಲಾಗುತ್ತಿದೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಇತ್ತೀಚೆಗಷ್ಟೇ ನಡೆದಿದ್ದ ಟಿ20 ವಿಶ್ವಕಪ್ ನಲ್ಲಿ ಕೆ.ಎಲ್. ರಾಹುಲ್ ಆಡಿರಲಿಲ್ಲ. ಈಗ ಕ್ಯಾಪ್ಟನ್ ಆಗಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯಲು ರಾಹುಲ್ ಸಜ್ಜಾಗಿದ್ದಾರೆ.
ಹಿಂದೆ ಐಪಿಎಲ್ ನಲ್ಲಿ ಗಂಭೀರ್ – ರಾಹುಲ್ ಜೊತೆಯಾಗಿ ನಿರ್ವಹಿಸಿದ್ದರು. ಐಪಿಎಲ್ 2022-23 ರಲ್ಲಿ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರೆ, ರಾಹುಲ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಶ್ರೀಲಂಕಾ ವಿರುದ್ಧ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಇಲ್ಲಿ ರಾಹುಲ್ ಏಕದಿನ ತಂಡವನ್ನು ಮುನ್ನಡೆಸಿದರೆ, ಟಿ20 ತಂಡಕ್ಕೆ ಯಾರು ಕ್ಯಾಪ್ಟನ್ ಆಗಲಿದ್ದಾರೆ ಎಂಬ ಪ್ರಶ್ನೆಯೊಂದು ಸೃಷ್ಟಿಯಾಗಿದೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಈಗಾಗಲೇ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮೂಲಕ ಭಾರತ ತಂಡಕ್ಕೆ ಹೊಸ ನಾಯಕ ಪಾದರ್ಪಣೆ ಮಾಡಲಿದ್ದಾರೆ. ಈ ಹೊಸ ನಾಯಕ ಯಾರೆಂಬ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಹೆಸರು ಕೇಳಿ ಬರುತ್ತಿದೆ. ಪಾಂಡ್ಯ ಹೆಸರು ಕೂಡ ಈ ಲಿಸ್ಟ್ ನಲ್ಲಿದೆ.