ನವದೆಹಲಿ: ಬಹುನಿರೀಕ್ಷಿತ, ದೇಶಾದ್ಯಂತ ಕುತೂಹಲ ಮೂಡಿಸಿರುವ ಬಿಜೆಪಿ ರಾಷ್ಟ್ರೀಯ ನೂತನ ಅಧ್ಯಕ್ಷರ ನೇಮಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 15ರೊಳಗೆ ಬಿಜೆಪಿಗೆ ನೂತನ ಸಾರಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾರದ ಅವಧಿ ಮುಗಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಮಾರ್ಚ್ 15ರೊಳಗೆ ಆಯ್ಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಯುವ ಮೊದಲು, ಶೇ.50ರಷ್ಟು ರಾಜ್ಯಗಳಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆಗಳು ಪೂರ್ಣಗೊಳ್ಳುವುದು ಅವಶ್ಯಕ. ಅಂದರೆ ಶೇ.50ರಷ್ಟು ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ನೇಮಕ ಆಗಿರಬೇಕು. ಅದಕ್ಕೂ ಮೊದಲು ಬೂತ್, ಮಂಡಲ ಮತ್ತು ಜಿಲ್ಲಾ ಮಟ್ಟದ ಚುನಾವಣೆಗಳು ನಡೆಯುತ್ತವೆ. ಇದಾದ ನಂತರವೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಈಗಾಗಲೇ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆಗಳು ಪೂರ್ಣಗೊಂಡಿವೆ. ಅಂದರೆ, ಘಟಕ ಮುಖ್ಯಸ್ಥರ ಚುನಾವಣೆಗಳು ಕನಿಷ್ಠ ಆರು ರಾಜ್ಯಗಳಲ್ಲಿ ನಡೆಯಬೇಕಾಗಿದೆ. ಹೀಗಾಗಿ ಪಕ್ಷವು ಈ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದೆ. ಇದಾದ ಬಳಿಕವೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.
ಬಿಜೆಪಿಯು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸಲು ಸತತ ಪ್ರಯತ್ನ ಮಾಡುತ್ತಿದೆ. ಹಾಗಾಗಿ, ಈ ಬಾರಿ ದಕ್ಷಿಣ ಭಾರತದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಜೆ.ಪಿ.ನಡ್ಡಾ ಅವರು 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರ ಅಧಿಕಾರದ ಅವಧಿಯನ್ನು ವಿಸ್ತರಿಸಲಾಗಿತ್ತು.