ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತರ ಪ್ರತಿಭಟನೆ ನಡೆಸಿ, ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಲಾಯಿತು. ಆದರೆ, ಈಗ ಹೈಕೋರ್ಟ್ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದ್ದು ಯಾರಿಗೆ ಚಪ್ಪಲಿ ಹಾರ ಹಾಕಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಸಿದ್ದರಾಮಯ್ಯ ಅವರಿಗೆ ಚಪ್ಪಲಿ ಹಾರ ಹಾಕಬೇಕಾ? ಎಂದು ಪ್ರಶ್ನಿಸಿ, ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ಸರ್ಕಾರಿ ಭೂಮಿ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಬಗ್ಗೆಯೂ ಅವರು ಮಾತನಾಡುತ್ತಿದ್ದಾರೆ. ಅರ್ಜಿ ಹಾಕದಿರುವ ಕಂಪನಿಗೆ ಗಣಿ ಗುತ್ತಿಗೆ ಕೊಡಲಾಗಿದೆ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರ 2009ರಲ್ಲೇ ಭೂಮಿ ಯಾರಿಗೂ ಕೊಡಲಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಯಾರೋ ಒಬ್ಬ ಅಧಿಕಾರಿ ಮಾಡಿದ ತಪ್ಪಿಗೆ ಕುಮಾರಸ್ವಾಮಿ ಮೇಲೆ ಆರೋಪ ಮಾಡುತ್ತಿದ್ದಾರೆ. ಜಂತಕಲ್ಮೈನಿಂಗ್ ವಿಚಾರದಲ್ಲಿ ಆಗಿನ ಸಿಎಂ ಆದೇಶ ಮಿಸ್ ಕಂಡಕ್ಟ್ ಆಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ. ನ್ಯಾ.ಸಂತೋಷ ಹೆಗಡೆ ಅವರು ಹಾಗೆಂದು ಉಲ್ಲೇಖ ಮಾಡಿದ್ದಾರೆ. ಆದರೂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೂಡಾ ಹಗರಣ ಬಗ್ಗೆ ಚರ್ಚೆ ನಡೆಯುತ್ತಿದೆ. ಹೈಕೋರ್ಟ್ ಪೀಠದಲ್ಲಿ ಸಿಎಂ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಕೋರ್ಟ್ ಆದೇಶದ ಪ್ರತಿ ಎಲ್ಲರಿಗೂ ಸಿಕ್ಕಿದೆ. ಆದರೆ, ಸಿಎಂಗೆ ಸಿಕ್ಕಿಲ್ಲ. ಜೆಡಿಎಸ್ ಬಿಜೆಪಿ ಒಳಸಂಚು ಮಾಡಿವೆ, ಕುಮಾರಸ್ವಾಮಿ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಕೇಳುತ್ತಾರೆ. ಸಿದ್ದರಾಮಯ್ಯ ಅವರು. ಇದು ನಮ್ಮ ಸಿಎಂ ವರಸೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಐದು ವರ್ಷಗಳ ಸರ್ಕಾರ ಮಾಡಿದ್ದಾಗ ದಿನವೂ ಇಂಥವೇ ಅಕ್ರಮಗಳನ್ನು ನಡೆಸಿದ್ದರು. ಅದನ್ನು ದಿನವೂ ನಾನು ಪ್ರಶ್ನೆ ಮಾಡುತ್ತಿದ್ದೆ. ಇವನೊಬ್ಬನಿಂದ ನನಗೆ ಮುಜುಗರ ಇಲ್ಲದೆ ಆಡಳಿತ ನಡೆಸೋಕೆ ಆಗುತ್ತಿಲ್ಲ, ಇವನನ್ನು ಮಟ್ಟ ಹಾಕಿದರೆ ನನಗೆ ಅಡ್ಡ ಯಾರೂ ಇರುವುದಿಲ್ಲ ಎಂದು ಅವತ್ತೇ ನನ್ನ ವಿರುದ್ಧ ಕುತಂತ್ರ ಮಾಡಿದ್ದರು. ನಾನು ಅವುಗಳನ್ನೆಲ್ಲ ಧೈರ್ಯವಾಗಿ ಎದುರಿಸಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಮೇಲೆ ಬಂದಿರುವ ಆರೋಪಗಳಿಗೆ ಉತ್ತರ ಕೊಡುತ್ತೇನೆ. ನಾನು ಪಲಾಯನ ಮಾಡುವ ಪೈಕಿ ಅಲ್ಲ. ಕರ್ನಾಟಕದಲ್ಲಿ ಇರುವುದು ದರೋಡೆಕೋರರ ಸರ್ಕಾರ. ಅವರು ಹಿಂದೆಯೂ ದರೋಡೆ ಮಾಡುತ್ತಿದ್ದರು. ಈಗಲೂ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.