ಕಳೆದ ಹಲವು ದಶಕಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ಕಾಣೆಯಾಗಿರುವ ಎಲ್ಲಾ ಹೆಣ್ಣುಮಕ್ಕಳನ್ನು ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ “ಕೊಂದವರು ಯಾರು?” ಸಂಘಟನೆಯ ಆಶ್ರಯದಲ್ಲಿ ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದ ‘ಮಹಿಳಾ ಜಾಥಾ ಮತ್ತು ಮಹಿಳಾ ನ್ಯಾಯ ಸಮಾವೇಶʼ ಯಶಸ್ವಿಯಾಗಿದೆ. ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.
ತಾಲೂಕು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿರುವ ಎಲ್ಲ ಹೆಣ್ಣುಮಕ್ಕಳ ಕುರಿತು ತನಿಖೆ ನಡೆಸಲೇಬೇಕು ಎಂದು ಒಕ್ಕೊರಲ ಧ್ವನಿಯಿಂದ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ್ತಿ ಜ್ಯೋತಿ ಅವರು, ಧರ್ಮಸ್ಥಳ ಗ್ರಾಮದ ಸಾವುಗಳ ಕುರಿತು ನಡೆಯುತ್ತಿರುವ ಎಸ್‌ಐಟಿ ತನಿಖೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಶೇಷ ತನಿಖಾ ತಂಡವು ಕೇವಲ ಚಿನ್ನಯ್ಯನ ಪ್ರಕರಣ ಕುರಿತು ಮಾತ್ರ ತನಿಖೆ ನಡೆಸುತ್ತಿದೆ. ಆದರೆ ಧರ್ಮಸ್ಥಳದಲ್ಲಿ ನಡೆದ ಇತರ ನೂರಾರು ಅಸಹಜ ಸಾವುಗಳ ಬಗ್ಗೆ ಮೌನ ವಹಿಸಿದೆ. ಇದು ಯಾವ ರೀತಿಯ ತನಿಖೆ ಎಂದು ಪ್ರಶ್ನಿಸಿದರು.
ನಮ್ಮ ಹೋರಾಟ ಸಂಪೂರ್ಣವಾಗಿ ನೊಂದವರ ಪರವಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಕೂಡ ಅಸಹಜ ಸಾವುಗಳನ್ನು ತನಿಖೆ ನಡೆಸುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಆದರೂ ಎಸ್‌ಐಟಿ ಏಕೆ ಇನ್ನೂ ಈ ಸಾವುಗಳನ್ನು ಕುರಿತು ತನಿಖೆ ಆರಂಭಿಸಿಲ್ಲ ಎಂದರು. ಎಸ್‌ಐಟಿ ಮೇಲೆ ಪ್ರಬಲ ಶಕ್ತಿಗಳ ಒತ್ತಡ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ, ತನಿಖಾ ಸಂಸ್ಥೆಗಳು ಇಂತಹ ಪ್ರಭಾವಕ್ಕೆ ಮಣಿಯಬಾರದು. ಸತ್ಯವನ್ನು ಹೊರತೆಗೆಯಲೇಬೇಕು ಎಂದು ಗುಡುಗಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಮಾತನಾಡಿ, ಈ ಹೋರಾಟವನ್ನು ಹತ್ತಿಕ್ಕಲು ಷಡ್ಯಂತ್ರಗಳು ನಡೆಯುತ್ತಲೇ ಇದ್ದರೂ ನಾವು ಯಾವುದಕ್ಕೂ ಜಗ್ಗದೆ ರಾಜ್ಯಾದ್ಯಂತ ಮಹಿಳೆಯರನ್ನು ಒಗ್ಗೂಡಿಸಿ ಇಲ್ಲಿ ಸೇರಿದ್ದೇವೆ. ಅಸು ನೀಗಿದ ಪ್ರತಿಯೊಬ್ಬ ಮಹಿಳೆಗೂ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ ಎಂದು ಹೇಳಿದರು.
ಮತ್ತೊಬ್ಬರು ಹೋರಾಟಗಾರ್ತಿ ಶಶಿಕಲಾ ಶೆಟ್ಟಿ ಅವರು ಇಂದಿನ ಸಮಾವೇಶ ಹೋರಾಟದ ಅಂತ್ಯವಲ್ಲ, ಆರಂಭ ಎಂದು ಎಚ್ಚರಿಸುತ್ತಾ ,ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳು ನೋವುಂಟು ಮಾಡಿವೆ. ತಮ್ಮವರನ್ನು ಕಳೆದುಕೊಂಡ ನೊಂದ ಕುಟುಂಬಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ. ನಮ್ಮ ಈ ಹೋರಾಟಕ್ಕೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅದಕ್ಕೆ ಇಲ್ಲಿ ನೆರೆದಿರುವ ಜನಸ್ತೋಮವೇ ಸಾಕ್ಷಿ ಎಂದು ಹೇಳಿದರು.
ಗಮನ ಸೆಳೆದ ಬೃಹತ್ ಜಾಥಾ:
ಸಮಾವೇಶಕ್ಕೂ ಮುನ್ನ ಬೆಳ್ತಂಗಡಿಯ ಮಾರಿಗುಡಿ ಬಳಿಯಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರಮುಖ ಬೀದಿಗಳಲ್ಲಿ ಸಾವಿರಾರು ಮಹಿಳೆಯರು ಮೌನವಾಗಿ ಜಾಥಾ ನಡೆಸಿದರು. ನ್ಯಾಯಕ್ಕಾಗಿ ಆಗ್ರಹಿಸಿ ಹಿಡಿದಿದ್ದ ಫಲಕಗಳು ಗಮನ ಸೆಳೆದವು. ಕೊಂದವರು ಯಾರು? ಮತ್ತು ನಮಗೆ ನ್ಯಾಯ ಬೇಕು ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ವಿವಿಧ ಮಹಿಳಾ ಸಂಘಟನೆಗಳು, ಪ್ರಗತಿಪರ ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು, ಧರ್ಮಸ್ಥಳದಲ್ಲಿ ಸಂಭವಿಸಿರುವ ಅಸಹಜ ಸಾವುಗಳನ್ನು ಕುರಿತು ನ್ಯಾಯಯುತ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡಲೇಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸುವ ಮೂಲಕ ಸಮಾವೇಶಕ್ಕೆ ಚಾಲನೆ ದೊರೆಯಿತು.
1979ರಲ್ಲಿ ನಡೆದ ವೇದವಲ್ಲಿ ಹತ್ಯೆ, 1986ರಲ್ಲಿ ನಡೆದ ಪದ್ಮಲತಾ ಕೊಲೆ, 2012ರಲ್ಲಿ ನಡೆದ ಯಮುನಾ ಮತ್ತು ನಾರಾಯಣ ಕೊಲೆ ಮತ್ತು ಇದೇ ವರ್ಷ ನಡೆದ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸೌಜನ್ಯ ಅತ್ಯಾಚಾರ ಕೊಲೆ ನಡೆದಿದೆ. ಆದರೆ ಈ ಎಲ್ಲ ಪ್ರಕರಣಗಳಲ್ಲಿ ಇದುವರೆಗೆ ನ್ಯಾಯ ಒದಗಿಸಲಾಗಿಲ್ಲ. ನಿಜವಾದ ಅರೋಪಿಗಳನ್ನು ಪತ್ತೆಹಚ್ಚಿ ಶಿಕ್ಷೆ ವಿಧಿಸಬೇಕು ಎಂದು ಭಾಷಣಕಾರರು ಆಗ್ರಹಪಡಿಸಿದರು. ಧರ್ಮಸ್ಥಳ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾದರೂ ಅಪರಾಧಿಗಳೇ ಪತ್ತೆಯಾಗದ ಮಹಿಳೆಯರ ಅತ್ಯಾಚಾರ, ಕೊಲೆ, ಅಸಹಜ ಸಾವು, ನಾಪತ್ತೆ ಪ್ರಕರಣಗಳು ಸಂಭವಿಸಿವೆ. ಆದ್ದರಿಂದ ಕಳೆದ ಹಲವು ದಶಕಗಳಲ್ಲಿ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರನ್ನೂ ವಿಚಾರಣೆ ಮಾಡಿ ಸತ್ಯ ಹೊರತರುವ ಜವಾಬ್ದಾರಿಯನ್ನು ಎಸ್ ಐಟಿ ನಿರ್ವಹಿಸಬೇಕು ಎಂದೂ ಆಗ್ರಹಪಡಿಸಿದರು.
ನಿರ್ಭಯ ಪ್ರಕರಣ ಡಿಸೆಂಬರ್ 16 ದೆಹಲಿಯಲ್ಲಿ ನಡೆದಿದ್ದು, ಕಳೆದ13 ವರ್ಷಗಳಿಂದಲೂ ದೇಶದಾದ್ಯಂತ ಮಹಿಳಾ ಸಂಘಟನೆಗಳು ಅದನ್ನು‘ಅತ್ಯಾಚಾರ ವಿರೋಧಿ ದಿನʼವನ್ನಾಗಿ ಆಚರಿಸುತ್ತಾ ಬಂದಿದ್ದು ಈ ಹೋರಾಟಕ್ಕೆ ಈ ದಿನವನ್ನೇ ಆರಸಿಕೊಂಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ :ಲೆಜೆಂಡ್ ಈಸ್ ಬ್ಯಾಕ್ ವಿತ್ ಸೇಫ್ಟಿ ಅಪ್‌ಗ್ರೇಡ್ ; ಡೀಲರ್‌ಶಿಪ್ ತಲುಪಿದ ಡ್ಯುಯಲ್ ಚಾನೆಲ್ ಎಬಿಎಸ್ ಇರುವ ಬಜಾಜ್ ಪಲ್ಸರ್ 220F!


















