ದೆಹಲಿಯ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಬುಧವಾರ ಆಯ್ಕೆಯಾಗಿದ್ದಾರೆ. ಪ್ರಥಮ ಬಾರಿಗೆ ಶಾಸಕಿಯಾಗಿದ್ದರೂ ಅವರು ರಾಜಕೀಯದಲ್ಲಿ ದೀರ್ಘ ಅನುಭವ ಹೊಂದಿದ್ದಾರೆ. ಪರ್ವೇಶ್ ವರ್ಮಾ ಸೇರಿದಂತೆ ಇತರ ಪ್ರಮುಖ ಮುಖಂಡರನ್ನು ಕಡೆಗಣಿಸಿ ರೇಖಾ ಅವರನ್ನು ಆಯ್ಕೆ ಮಾಡುವ ಮೂಲಕ, ಬಿಜೆಪಿ ಹಲವು ಆಯಾಮಗಳಲ್ಲಿ ಲಾಭ ಪಡೆಯಲು ಪ್ರಯತ್ನಿಸುತ್ತಿದೆ.
41 ವರ್ಷದ ರೇಖಾ ಗುಪ್ತಾ ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ ಸುಮಾರು 30,000 ಮತಗಳ ಅಂತರದಿಂದ ಗೆದ್ದಿದ್ದಾರೆ. “ಕಾಮ್ ಹೀ ಪಹಚಾನ್” (ನನ್ನ ಕೆಲಸವೇ ನನ್ನ ಗುರುತು) ಎಂಬ ಸಂದೇಶವನ್ನು ಅವರು ತಮ್ಮ ವೆಬ್ಸೈಟ್ನಲ್ಲಿ ತಮ್ಮ ಪ್ರಚಾರದ ಭಾಗವಾಗಿ ಬಳಸಿದ್ದರು. ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ದೆಹಲಿ ಬಿಜೆಪಿ ನಾಯಕರು ಪೈಪೋಟಿ ನಡೆಸಿದ ಪ್ರಮುಖ ಸ್ಪರ್ಧಿಗಳ ಪೈಕಿ ರೇಖಾ ಗುಪ್ತಾ ಕೂಡಾ ಒಬ್ಬರು. ಬಿಜೆಪಿ ನಾಯಕರಾದ ಪರವೇಶ್ ವರ್ಮಾ, ಅಶೀಷ್ ಸೂದ್, ಮಾಜಿ ಪ್ರತಿಪಕ್ಷ ನಾಯಕ ವಿಜೇಂದರ್ ಗುಪ್ತಾ, ಸತೀಶ್ ಉಪಾಧ್ಯಾಯ್ ಮತ್ತು ಜಿತೇಂದ್ರ ಮಹಾಜನ್ ಮೊದಲಾದವರು ಈ ಹುದ್ದೆಯ ಆಕಾಂಕ್ಷಿಗಳಾಗಿದ್ದರು.
ರೇಖಾ ಗುಪ್ತಾ ಯಾರು?
ರೇಖಾ ಗುಪ್ತಾ ಅವರ ರಾಜಕೀಯ ಪ್ರವಾಸ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಚುನಾವಣೆಯಿಂದ ಪ್ರಾರಂಭಗೊಂಡಿತ್ತು. ಅವರು ಮೂರು ಬಾರಿ ಪಾಲಿಕೆ ಸದಸ್ಯರಾಗಿದ್ದು ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯ (SDMC) ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2022ರಲ್ಲಿ ಎಎಪಿ ನಾಯಕ ಶೆಲ್ಲಿ ಓಬೆರಾಯ್ ವಿರುದ್ಧಗೆದ್ದು ಮೇಯರ್ ಆಗಿದ್ದರು. ರೇಖಾ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಅದಕ್ಕಿಂತ ಹಿಂದೆ ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿ ಕಾರ್ಯನಿರ್ವಹಿಸಿದ್ದಾರೆ. ದೌಲತ್ ರಾಮ್ ಕಾಲೇಜಿನಿಂದ ಪದವಿ ಪಡೆದ ಅವರು, 1996-97ರಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (DUSU) ಅಧ್ಯಕ್ಷರಾಗಿದ್ದರು. 2007ರಲ್ಲಿ ಉತ್ತರ ಪಿಟಂಪುರಾದಿಂದ ಮೊದಲ ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು.
ಬಿಜೆಪಿ ರೇಖಾ ಅವರನ್ನು ಆಯ್ಕೆ ಮಾಡಿದ್ದು ಯಾಕೆ?
ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ, ಮಹಿಳಾ ಮುಖ್ಯಮಂತ್ರಿಗಳ ಪರಂಪರೆಯನ್ನು ಮುಂದುವರಿಸಿದೆ. ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಆಡಳಿತಕ್ಕಿಂತ ಭಿನ್ನ ಎಂದು ತೋರಿಸಲು ಪ್ರಯತ್ನಿಸಿದೆ. ದೆಹಲಿಯು ಕಳೆದ ಮೂರು ದಶಕಗಳಿಂದ ಮಹಿಳಾ ಮುಖ್ಯಮಂತ್ರಿಗಳನ್ನು ಕಂಡಿತ್ತು. ಕಾಂಗ್ರೆಸ್ನ ಶೀಲಾ ದೀಕ್ಷಿತ್ 15 ವರ್ಷ ಆಡಳಿತ ನಡೆಸಿದ್ದರು. ಅವರ ಹಿಂದೆ ಎಎಪಿಯ ಆತಿಶಿ ಮತ್ತು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ದೆಹಲಿಯ ಮುಖ್ಯಮಂತ್ರಿಗಳಾಗಿದ್ದವರು,.
ಕಲ್ಕಾಜಿಯ ಶಾಸಕಿ ಆತಿಶಿ, ಕಳೆದ 5 ತಿಂಗಳ ಕಾಲ ದೆಹಲಿಯ ಮುಖ್ಯಮಂತ್ರಿಯಾಗಿದ್ದು, 2024 ಸೆಪ್ಟೆಂಬರ್ನಲ್ಲಿ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ಈ ಹುದ್ದೆಗೇರಿದ್ದರು.
1998ರಲ್ಲಿ ಕೇವಲ ಎರಡು ತಿಂಗಳ ಕಾಲ (ಅಕ್ಟೋಬರ್ 12ರಿಂದ ಡಿಸೆಂಬರ್ 3ರವರೆಗೆ) ದೆಹಲಿಯ ಮುಖ್ಯಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ಅವರನ್ನು ಚುನಾವಣೆಗೆ ಮುನ್ನ ಬಿಜೆಪಿ ನೇಮಕ ಮಾಡಿತ್ತು.
ಮಹಿಳಾ ಮುಖ್ಯಮಂತ್ರಿಗಳ ನಿರಂತರ ಆಡಳಿತದ ನಡುವೆ ಕೇಜ್ರಿವಾಲ್ ಅವರ 10 ವರ್ಷಗಳ ಆಡಳಿತ ಮಾತ್ರ ವಿಭಿನ್ನವಾಗಿತ್ತು. ಇದೀಗ ಆತಿಶಿ ಬಳಿಕ ರೇಖಾ ಗುಪ್ತಾ ಮುಖ್ಯಮಂತ್ರಿಯಾಗಿದ್ದಾರೆ.
70 ಸದಸ್ಯ ಬಳ್ಳದ ದೆಹಲಿ ವಿಧಾನಸಭಾ ಚುನಾವಣೆಗೆ, ಬಿಜೆಪಿ ಒಂಬತ್ತು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ ನಾಲ್ವರು ಗೆದ್ದಿದ್ದಾರೆ. 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚು ಮತ ಚಲಾಯಿಸಿದ್ದರು. ಮಹಿಳಾ ಮತದಾನದ ಪ್ರಮಾಣ 60.92% ಇದ್ದರೆ, ಪುರುಷರ ಮತದಾನದ ಪ್ರಮಾಣ 60.21% ಆಗಿತ್ತು.
ಮಹಿಳಾ ಮತದಾರರ ಮೇಲೆ ಭರವಸೆಯ ಇಟ್ಟಿದ್ದ ಆಮ್ ಆದ್ಮಿ ಪಕ್ಷ ಭಾರೀ ಸೋಲನ್ನು ಅನುಭವಿಸಿದೆ.
ಹಲವಾರು ಭರವಸೆಗಳು
ಮಹಿಳಾ ಮತದಾರರನ್ನು ಸೆಳೆಯುವ ಕಸರತ್ತಿನ ಭಾಗವಾಗಿ ಬಿಜೆಪಿ, ದೆಹಲಿ ವಿಧಾನಸಭಾ ಚುನಾವಣೆಯ ತಮ್ಮ ಪ್ರಣಾಳಿಕೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹಲವಾರು ಭರವಸೆಗಳನ್ನು ನೀಡಿತ್ತು.
ಆಪ್ 2100 ರೂಪಾಯಿ ಮಹಿಳಾ ಭತ್ಯೆಯನ್ನು ಘೋಷಿಸಿದ್ದರೆ, ಬಿಜೆಪಿ ಅದನ್ನು ಮೀರಿಸಿ, ಮಹಿಳಾ ಸಮೃದ್ಧಿ ಯೋಜನೆಯಡಿ ದೆಹಲಿಯ ಮಹಿಳೆಯರಿಗೆ ತಿಂಗಳಿಗೆ ₹2,500 ಹಣಕಾಸು ಸಹಾಯ ಘೋಷಿಸಿತ್ತು. ಉಚಿತ ಬಸ್ ಪ್ರಯಾಣದಂತಹ ಹಳೆಯ ಕಲ್ಯಾಣ ಯೋಜನೆಗಳನ್ನು ಮುಂದುವರಿಸುವ ಭರವಸೆ ನೀಡಿತ್ತು. ಬಿಜೆಪಿ ಪ್ರತಿ ಗರ್ಭಿಣಿಯರಿಗೆ ₹21,000 ಹಣ ಸಹಾಯ, ಆರು ಪೌಷ್ಟಿಕ ಆಹಾರ ಕಿಟ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ವೈಕಲ್, ಬ್ರೆಸ್ಟ್ ಮತ್ತು ಓವರಿಯನ್ ಕ್ಯಾನ್ಸರ್ ಪರೀಕ್ಷೆಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು.
ವಿವಾದಿತ ನಾಯಕಿಯಲ್ಲ
ದೆಹಲಿ ಬಿಜೆಪಿ ನಾಯಕರಾದ ರಮೇಶ್ ಬಿಧೂರಿ ಮತ್ತು ಪರವೇಶ್ ವರ್ಮಾರಂತಹ ನಾಯಕರಿಗೆ ಸಂಬಂಧಿಸಿದ ವಿವಾದಗಳು ಇದ್ದರೂ, ರೇಖಾ ಗುಪ್ತಾ ಅವರು ಯಾವುದೇ ಪ್ರಮುಖ ವಿವಾದಕ್ಕೆ ಒಳಗಾಗಿಲ್ಲ.
ರೆಖಾ ಗುಪ್ತಾ ಪಕ್ಷದ ಬೆಳವಣಿಗೆ ಜತೆ ಬೆಳೆದ ರಾಜಕೀಯ ನಾಯಕಿಯಾಗಿದ್ದು, ಮೂರು ದಶಕಗಳಿಂದ ಬಿಜೆಪಿ ಜತೆ ಕೆಲಸ ಮಾಡಿದ್ದಾರೆ. ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಘೋಷಿಸುವ ಮೂಲಕ, ಬಿಜೆಪಿ ವಿವಾದರಹಿತ, ಮಹಿಳಾ ನಾಯಕರನ್ನು ಮುಂದಕ್ಕೆ ತರಲು ಮತ್ತು ದೆಹಲಿಯ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯಲು ಉದ್ದೇಶಿಸಿದೆ.