ಬೆಂಗಳೂರು: ಅಕ್ರಮ ಚಿನ್ನ ಸಾಗಿಸುತ್ತಿದ್ದ ಪ್ರಕರಣದಲ್ಲಿ (Gold Smuggling Case) ನಟಿ ರನ್ಯಾ ರಾವ್ ಅರೆಸ್ಟ್ ಆಗಿದ್ದಾರೆ. ಇಂದು ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಡಿಆರ್ ಐ ಅಧಿಕಾರಿಗಳು ಕೋರ್ಟ್ ಎದುರು ಹಾಜರು ಪಡಿಸಿದ್ದರು. ಕೋರ್ಟ್ ಮಾರ್ಚ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕುರಿತು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಕೋರ್ಟ್ (Court) ಆದೇಶಕ್ಕೂ ಮುನ್ನ ನಟಿಯನ್ನು ಜಡ್ಜ್ ಅಧಿಕಾರಿಗಳ ತನಿಖೆಯ ಕುರಿತು ಪ್ರಶ್ನೆ ಮಾಡಿದರು. ಆಗ ಜಡ್ಜ್ ಮುಂದೆ ನಟಿ ಕಣ್ಣೀರಿಟ್ಟು ಗೋಳಾಡಿದ್ದಾರೆ.
ವಿಚಾರಣೆ ವೇಳೆ ಅಧಿಕಾರಿಗಳು ಏನಾದರೂ ತೊಂದರೆ ಕೊಡುತ್ತಿದ್ದಾರಾ? ಹಿಲ್ ಟ್ರೀಟ್ಮೆಂಟ್ ಕೊಟ್ಟಿದ್ದಾರಾ? ಎಂದು ಜಡ್ಜ್ ಕೇಳಿದ್ದಕ್ಕೆ ಕಣ್ಣೀರಿಡುತ್ತಲೇ ರನ್ಯಾ ಉತ್ತರಿಸಿದ್ದಾರೆ. ಮಾನಸಿಕವಾಗಿ ಬಹಳ ಹಿಂಸೆ ನೀಡಿದ್ದಾರೆ. ನಿನಗೆ ಇದರಿಂದ ಏನಾಗಲಿದೆ ಎಂಬುವುದು ಗೊತ್ತಾ ಎಂದು ಭಯಬೀಳಿಸಿದ್ದಾರೆ. ಸತ್ಯ ಒಪ್ಪಿಕೊಳ್ಳುವಂತೆ ಹೆದರಿಸುತ್ತಿದದಾರೆ. ತಲೆಗೆ ಸುತ್ತಿಗೆಯಲ್ಲಿ ಹೊಡೆದಂತೆ ಪ್ರಶ್ನೆ ಕೇಳುತ್ತಾರೆ. ಕೆಟ್ಟದಾಗಿ ಬೈಯ್ದಿದ್ದಾರೆ. ನಾನು ಏನು ಮಾಡಿಲ್ಲ ಅಂದರೂ ಹಿಂಸೆ ನೀಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ನಾನು ಭಾವನಾತ್ಮಕವಾಗಿ ಕುಗ್ಗಿಹೋಗಿದ್ದೇನೆ ಎಂದು ಕೈ ಮುಗಿದು ಜಡ್ಜ್ ಮುಂದೆ ಬೇಡಿಕೊಂಡಿದ್ದಾರೆ.
ಆದರೆ, ರನ್ಯಾ ಆರೋಪವನ್ನು ತನಿಖಾಧಿಕಾರಿಗಳು ಅಲ್ಲಗಳೆದಿದ್ದಾರೆ. ಪ್ರಶ್ನೆ ಕೇಳುವುದು ಕಿರುಕುಳ ಹೇಗಾಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ನ್ಯಾಯಾಧೀಶರು, ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದರು.
ಡಿಆರ್‌ಐ ಸರಣಿ ಪ್ರಶ್ನೆಗಳಿಗೆ ತತ್ತರಿಸಿರುವ ನಟಿ ರನ್ಯಾ ರಾವ್ (Ranya Rao) ಮಾತು ಮಾತಿಗೂ ಕಣ್ಣೀರು ಇಡುತ್ತಿದ್ದಾರೆ ಎನ್ನಲಾಗಿದೆ. ಸರಿಯಾಗಿ ಉತ್ತರ ಕೊಡದೆ, ನನ್ನನ್ನು ಈ ಕೇಸ್ ನಲ್ಲಿ ಸಿಲುಕಿಸಿದ್ದಾರೆ. ಹಿಂದೆ ಯಾವತ್ತೂ ಚಿನ್ನ ಸಾಗಟ ಮಾಡಿಲ್ಲ. ನನಗೇನು ಗೊತ್ತಿಲ್ಲ ಎಂದು ಉತ್ತರ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.