ನವದೆಹಲಿ: ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸುವ ಮೂಲಕ ದಸರೆಗೂ ಮುನ್ನವೇ ದೇಶದ ನಿವಾಸಿಗಳಿಗೆ ದೀಪಾವಳಿಯ ಸಿಹಿ ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಮಂಡಳಿಯು, ಈ ಹಿಂದೆ ಇದ್ದ ಶೇ.12 ಮತ್ತು ಶೇ. 28ರ ತೆರಿಗೆ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಿ, ಬಹುತೇಕ ಸರಕುಗಳಿಗೆ ಶೇ. 5 ಮತ್ತು ಶೇ. 18ರ ದರದಲ್ಲಿ ಮಾತ್ರ ತೆರಿಗೆ ವಿಧಿಸಿರುವುದಾಗಿ ಘೋಷಿಸಿದೆ. ಇದರ ಜೊತೆಗೆ, “ಅಪಾಯಕಾರಿ ಸರಕುಗಳು” (Sin Goods) ಮತ್ತು ಕೆಲವು ಅತಿ ಐಷಾರಾಮಿ ವಸ್ತುಗಳಿಗೆಂದೇ ಶೇ.40ರ ವಿಶೇಷ ತೆರಿಗೆ ದರವನ್ನು ಪರಿಚಯಿಸಲಾಗಿದೆ. ಇಂಥ ಸರಕುಗಳ ಕುರಿತು ಮಾಹಿತಿ ಇಲ್ಲಿದೆ:
ಏನಿದು ‘ಅಪಾಯಕಾರಿ ಸರಕುಗಳು’?
ಸಮಾಜ ಮತ್ತು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ವಸ್ತುಗಳನ್ನು ‘ಅಪಾಯಕಾರಿ ಅಥವಾ ಹಾನಿಕಾರಕ ಸರಕುಗಳು’ ಎಂದು ವರ್ಗೀಕರಿಸಲಾಗಿದೆ. ಇವುಗಳನ್ನು “ಡಿಮೆರಿಟ್ ಗೂಡ್ಸ್” ಎಂದೂ ಕರೆಯುತ್ತಾರೆ. ಇವುಗಳ ಬಳಕೆಯನ್ನು ಕಡಿಮೆ ಮಾಡುವ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಹೆಚ್ಚಿನ ಆದಾಯವನ್ನು ಗಳಿಸುವ ಉದ್ದೇಶದಿಂದ, ಸರ್ಕಾರವು ಇವುಗಳ ಮೇಲೆ ಅತಿ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತದೆ.
ಮದ್ಯವನ್ನು ‘ಹಾನಿಕಾರಕ ಸರಕು’ ಎಂದು ಪರಿಗಣಿಸಲಾಗಿದ್ದರೂ, ಅದು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿದೆ. ರಾಜ್ಯಗಳು ಅದರ ಮೇಲೆ ಪ್ರತ್ಯೇಕವಾಗಿ ಅಬಕಾರಿ ಸುಂಕವನ್ನು ವಿಧಿಸುತ್ತವೆ.
ಅತಿ ಹೆಚ್ಚಿನ ತೆರಿಗೆ ಏಕೆ?
‘ಅಪಾಯಕಾರಿ ಸರಕುಗಳ’ ಮೇಲೆ ಈ ಹಿಂದೆ ಶೇ.28ರಷ್ಟು ಜಿಎಸ್‌ಟಿ ಮತ್ತು ಹೆಚ್ಚುವರಿ ಪರಿಹಾರ ಸೆಸ್ (Compensation Cess) ವಿಧಿಸಲಾಗುತ್ತಿತ್ತು. ಈಗ ಈ ದರವನ್ನು ಶೇ. 40ಕ್ಕೆ ಹೆಚ್ಚಿಸಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಕಾರ, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ವಿಧಿಸಲಾಗುವ ಶೇ.28ರ ತೆರಿಗೆ ಮತ್ತು ಸೆಸ್, ರಾಜ್ಯಗಳಿಗೆ ಆದಾಯ ನಷ್ಟವನ್ನು ಸರಿದೂಗಿಸಲು ತೆಗೆದುಕೊಂಡ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡುವವರೆಗೆ ಮುಂದುವರಿಯುತ್ತದೆ. ನಂತರ, ಈ ವಸ್ತುಗಳ ಮೇಲೆ ಅವುಗಳ ಚಿಲ್ಲರೆ ಮಾರಾಟ ಬೆಲೆಯ (RSP) ಆಧಾರದ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ.
ಶೇ.40 ತೆರಿಗೆ ವ್ಯಾಪ್ತಿಗೆ ಬರುವ ವಸ್ತುಗಳು:
ಪಾನ್ ಮಸಾಲಾ, ಗುಟ್ಕಾ, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳು.
ಸಕ್ಕರೆ ಅಂಶವಿರುವ ಮತ್ತು ಕಾರ್ಬೊನೇಟೆಡ್ ಪಾನೀಯಗಳು.
1,200 ಸಿಸಿ (ಪೆಟ್ರೋಲ್) ಅಥವಾ 1,500 ಸಿಸಿ (ಡೀಸೆಲ್) ಗಿಂತ ದೊಡ್ಡದಾದ ಕಾರುಗಳು.
350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಮೋಟಾರ್‌ಸೈಕಲ್‌ಗಳು.
ಖಾಸಗಿ ವಿಮಾನಗಳು, ವಿಹಾರ ನೌಕೆಗಳು.
ಆನ್‌ಲೈನ್ ಜೂಜು ಮತ್ತು ಗೇಮಿಂಗ್.



















