ಹೊಸದಿಲ್ಲಿ: ಟೀಂ ಇಂಡಿಯಾದ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ಅವರು ಮುಂಬರುವ 2025-26ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನವೆಂಬರ್ 26ರಿಂದ ಆರಂಭವಾಗಲಿರುವ ಈ ಪ್ರತಿಷ್ಠಿತ ದೇಶೀಯ ಟಿ20 ಟೂರ್ನಿಗೆ ಹಾಲಿ ಚಾಂಪಿಯನ್ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಶುಕ್ರವಾರ 17 ಸದಸ್ಯರ ಬಲಿಷ್ಠ ಪಡೆಯನ್ನು ಪ್ರಕಟಿಸಿದೆ. ವಿಶೇಷವೆಂದರೆ, ಅಂತಾರಾಷ್ಟ್ರೀಯ ಟಿ20 ನಾಯಕರಾಗಿದ್ದರೂ ಇಲ್ಲಿ ಹಿರಿಯ ಆಟಗಾರನಾಗಿ ಕಣಕ್ಕಿಳಿಯಲಿರುವ ಸೂರ್ಯಕುಮಾರ್, ಶಾರ್ದೂಲ್ ಠಾಕೂರ್ ಅವರ ನಾಯಕತ್ವದಲ್ಲಿ ಆಡಲಿದ್ದಾರೆ.
ಕಳೆದುಹೋದ ಲಯದ ಹುಡುಕಾಟದಲ್ಲಿ ‘ಮಿಸ್ಟರ್ 360’
ಈ ಬಾರಿಯ ಐಪಿಎಲ್‌ನಲ್ಲಿ 167.91ರ ಸ್ಟ್ರೈಕ್ ರೇಟ್‌ನಲ್ಲಿ 717 ರನ್ ಸಿಡಿಸಿ ಅಬ್ಬರಿಸಿದ್ದ ಸೂರ್ಯಕುಮಾರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ತಮ್ಮ ನೈಜ ಆಟ ಪ್ರದರ್ಶಿಸಲು ಪರದಾಡುತ್ತಿದ್ದಾರೆ. ಅಂಕಿಅಂಶಗಳನ್ನೇ ಗಮನಿಸುವುದಾದರೆ, 2025ರಲ್ಲಿ ಆಡಿದ 15 ಟಿ20 ಇನ್ನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 184 ರನ್ ಮಾತ್ರ. 15.33ರ ಸರಾಸರಿ ಮತ್ತು 127.77ರ ಸ್ಟ್ರೈಕ್ ರೇಟ್ ಖಂಡಿತವಾಗಿಯೂ ಅವರಂತಹ ದರ್ಜೆಯ ಆಟಗಾರನಿಗೆ ಶೋಭೆ ತರುವಂಥದ್ದಲ್ಲ. ಹೀಗಾಗಿ, ಡಿಸೆಂಬರ್ 9ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಟಿ20 ಸರಣಿಗೂ ಮುನ್ನ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಈ ಟೂರ್ನಿ ಅವರಿಗೆ ನಿರ್ಣಾಯಕ ವೇದಿಕೆಯಾಗಲಿದೆ.
ಮುಂಬೈ ಪಾಲಿಗೆ ಆನೆಬಲ, ಟೀಂ ಇಂಡಿಯಾಗೆ ಸಿದ್ಧತೆ
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂನಲ್ಲಿ ಮುಂಬೈ ತನ್ನ ಲೀಗ್ ಪಂದ್ಯಗಳನ್ನು ಆಡಲಿದೆ. ಸೂರ್ಯಕುಮಾರ್ ಅವರ ಸೇರ್ಪಡೆಯಿಂದ ಹಾಲಿ ಚಾಂಪಿಯನ್ ಮುಂಬೈ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಿದೆ. ಈಗಾಗಲೇ ತಂಡದಲ್ಲಿ ಅಜಿಂಕ್ಯ ರಹಾನೆ, ಶಿವಂ ದುಬೆ, ಸರ್ಫರಾಜ್ ಖಾನ್ ಮತ್ತು ಪೃಥ್ವಿ ಶಾ ಅವರಂತಹ ಘಟಾನುಘಟಿ ಆಟಗಾರರಿದ್ದು, ಇದೀಗ ಸೂರ್ಯ ಸೇರ್ಪಡೆಯೊಂದಿಗೆ ತಂಡ ಮತ್ತಷ್ಟು ಬಲಿಷ್ಠವಾಗಿದೆ. 2026ರ ಟಿ20 ವಿಶ್ವಕಪ್ ದೃಷ್ಟಿಯಿಂದಲೂ ಸೂರ್ಯಕುಮಾರ್ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವುದು ಬಿಸಿಸಿಐ ಆಯ್ಕೆಗಾರರಿಗೆ ಸಮಾಧಾನ ತಂದಿದೆ.
ತಂಡದ ವಿವರ
ಶಾರ್ದೂಲ್ ಠಾಕೂರ್ (ನಾಯಕ), ಅಜಿಂಕ್ಯ ರಹಾನೆ, ಆಯುಷ್ ಮ್ಹಾತ್ರೆ, ಅಂಗಕೃಷ್ ರಘುವಂಶಿ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಾಡ್, ಸರ್ಫರಾಜ್ ಖಾನ್, ಶಿವಂ ದುಬೆ, ಸಾಯಿರಾಜ್ ಪಾಟೀಲ್, ಮುಶೀರ್ ಖಾನ್, ಸೂರ್ಯಾಂಶ್ ಶೆಡ್ಗೆ, ಅಥರ್ವ ಅಂಕೋಲೇಕರ್, ತನುಷ್ ಕೋಟ್ಯಾನ್, ಶಮ್ಸ್ ಮುಲಾನಿ, ತುಷಾರ್ ದೇಶಪಾಂಡೆ, ಇರ್ಫಾನ್ ಉಮೈರ್ ಮತ್ತು ಹಾರ್ದಿಕ್ ತಮೋರ್ (ವಿಕೆಟ್ ಕೀಪರ್).
ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ‘ಒಂದೇ ತಂಡ, ಒಂದೇ ಗುರಿ’: ಕಿವೀಸ್ ಸರಣಿಗೆ ಆಯ್ಕೆಯಾದವರೇ ವಿಶ್ವಕಪ್‌ಗೂ ಫೈನಲ್!



















