ದಾವಣಗೆರೆ: ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ನಾಯಿ ಮಾಂಸ (Dog Meat) ಬರುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದರು. ಹೀಗಾಗಿ ಅಧಿಕಾರಿಗಳು ಮಾಂಸದ ಸ್ಯಾಂಪಲ್ ಪಡೆದು ಲ್ಯಾಬ್ ಗೆ ಕಳುಹಿಸಿದ್ದರು. ಸದ್ಯ ಲ್ಯಾಬ್ ವರದಿ ಬಂದಿದ್ದು, ಈ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿಗೆ ಬಂದಿದ್ದು ಮೇಕೆಯ ಮಾಂಸ ಎಂಬುವುದು ವರದಿಯಲ್ಲಿ ದೃಢವಾಗಿದೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ (G Parmeshwar) ಹೇಳಿದ್ದಾರೆ. ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಪಾರ್ಸಲ್ ನಲ್ಲಿ ನಾಯಿ ಮಾಂಸ ಬಂದಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಮಾಂಸದ ಸ್ಯಾಂಪಲ್ ನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ಲ್ಯಾಬ್ ನಲ್ಲಿ ಅದು ಮೇಕೆ ಮಾಂಸ ಎಂದು ರಿಪೋರ್ಟ್ ಬಂದಿದೆ ಎಂದು ಹೇಳಿದ್ದಾರೆ. ಹಲವರು ಸುಮ್ಮನೆ ಈ ವಿಷಯವನ್ನು ದೊಡ್ಡದು ಮಾಡಿದ್ದಾರೆ. ಮಾಂಸ ಮಾರಾಟ ಮಾಡುವುದು ಅವರ ವೃತ್ತಿ. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಮಾಂಸ ಮಾರಾಟ ಮಾಡುವುದನ್ನು ಅವರು ಕಾಯಕ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯ ಪಾದಯಾತ್ರೆ ಕುರಿತು ಮಾತನಾಡಿದ ಅವರು, ಬಿಜೆಪಿಗೆ ರಾಜ್ಯ ಸರ್ಕಾರವನ್ನು ಎದುರಿಸಲು ಬೇರೆ ಯಾವ ದಾರಿ ಇಲ್ಲದಾಗಿದೆ. ಹೀಗಾಗಿ ಸಿಎಂ ಮೇಲೆ ಅನಾವಶ್ಯಕ ಆರೋಪ ಮಾಡಿ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಮೂಡಾದಲ್ಲಿ ನಡೆದಿಲ್ಲ. ಆದರೂ ಕಾನೂನು ಉಲ್ಲಂಘನೆ ಆಗಿದೆ ಎಂದು ಬಿಂಬಿಸಲು ಬಿಜೆಪಿ ಹೊರಟಿದೆ ಎಂದು ಹೇಳಿದ್ದಾರೆ.
