ಬೆಂಗಳೂರು: ಬಿಜೆಪಿಗೆ ಸರಳ ಬಹುಮತ ಸಿಗದಿದ್ದರೂ ಎನ್ ಡಿಎ (NDA) ಕೂಟಕ್ಕೆ ಬಹುಮತ ಸಿಕ್ಕಿದೆ. ಅಲ್ಲದೇ, ಎನ್ ಡಿಎ ಸರ್ಕಾರ ರಚಿಸಲು ಮುಂದಾಗಿದ್ದು, ಮೋದಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಕರ್ನಾಟಕದಿಂದ ಯಾವ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬ ಚರ್ಚೆಗಳು ಶುರುವಾಗಿವೆ.
ರಾಜ್ಯದಿಂದ ಸಚಿವ ಸಂಪುಟ ಸೇರುವ ನಾಯಕರ ಪೈಕಿ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಒಬ್ಬರಾಗಿದ್ದಾರೆ. ಈ ವಿಷಯವಾಗಿ ಮಾತನಾಡಿದ್ದ ಕುಮಾರಸ್ವಾಮಿ, ನನಗೆ ಕೃಷಿ ಪೋರ್ಟ್‌ಫೋಲಿಯೊದಲ್ಲಿ ಆಸಕ್ತಿ ಇದೆ. ಆದರೆ ಏನಾಗುತ್ತದೆ ಎಂದು ಕಾದು ನೋಡೋಣ. ರಾಷ್ಟ್ರೀಯ ಮಟ್ಟದ ಬಿಜೆಪಿ ನಾಯಕರಿಗೆ ರಾಜ್ಯದ ಹಿತದೃಷ್ಟಿಯಿಂದ ಏನು ಮಾಡಬೇಕೆಂಬುವುದರ ಬಗ್ಗೆ ಉತ್ತಮ ಆಲೋಚನೆ ಇದೆ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಎರಡನೇ ಮತ್ತು ಮೂರನೇ ಅವಧಿಗೆ ಮರು ಆಯ್ಕೆಯಾದ ಕೆಲವರು ಸಹ ರೇಸ್‌ನಲ್ಲಿದ್ದಾರೆ. ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಕೂಡ ರೇಸ್ ನಲ್ಲಿದ್ದಾರೆ. ಕೇಂದ್ರದ ಮಾಜಿ ಸಚಿವ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ಮರು ಆಯ್ಕೆಯಾಗಿರುವ ಸಂಸದ ಬಿವೈ ರಾಘವೇಂದ್ರ ಕೂಡ ರೇಸ್ ನಲ್ಲಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಮೂಲಗಳಂತೆ, ಕೇಂದ್ರ ಸಚಿವ ಸಂಪುಟಕ್ಕೆ ಕುಮಾರಸ್ವಾಮಿ ಸೇರಿದಂತೆ ಮೂವರು ಸಂಸದರಿಗೆ ಮಾತ್ರ ಅವಕಾಶವಿದೆ. ಬಿ.ವೈ. ರಾಘವೇಂದ್ರ, ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಪೈಕಿ ಒಬ್ಬರನ್ನು ಲಿಂಗಾಯತ ಕೋಟಾದಲ್ಲಿ ಆಯ್ಕೆ ಮಾಡಬಹುದು. ಒಕ್ಕಲಿಕ ಕೋಟಾದಲ್ಲಿ ಕುಮಾರಸ್ವಾಮಿಗೆ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದ ಆಡಳಿತ ಅನುಭವ, ಸೇವೆಯನ್ನು ಪರಿಗಣಿಸಿ ಡಾ. ಸಿಎನ್ ಮಂಜುನಾಥ್ ಅವರಿಗೂ ಸ್ಥಾನ ನೀಡುವ ಸಾಧ್ಯತೆ ಇದೆ.