ಉಡುಪಿ: ಈ ಬಾರಿ ರಾಜ್ಯದಲ್ಲಿ ಭಾರೀ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಂತೂ ಕಂಡರಿಯದ ದಾಖಲೆಯಾಗಿ ಉಳಿದಿದೆ.
ಈ ವರ್ಷದ ಮಳೆಯಿಂದಾಗಿ ಜನರು ಹೈರಾಣಾಗಿ ಹೋಗಿದ್ದಾರೆ. ಹಲವೆಡೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಈ ಪೈಕಿ ಉಡುಪಿ ಜಿಲ್ಲೆ ಅತೀ ಹೆಚ್ಚು ಮಳೆಯನ್ನು ಪಡೆದಿದ್ದು, ದಾಖಲೆಯ ಪುಟಕ್ಕೆ ಸೇರಿದೆ. ಜಿಲ್ಲೆಯಲ್ಲಿ 2024ರಲ್ಲಿ 11 ತಿಂಗಳೂ ಮಳೆ ಕಂಡಿದೆ. ಅಲ್ಲದೇ, ಫೆಂಗಲ್ ಚಂಡ ಮಾರುತ ಕೂಡ 65 ಮಿ.ಮೀ. ಮಳೆ ಸುರಿಸಿದೆ. ಹೀಗಾಗಿ ರಾಜ್ಯದ 31 ಜಿಲ್ಲೆಗಳ ಪೈಕಿ 5 ಸಾವಿರ ಮಿ.ಮೀ.ಗಿಂತ ಅಧಿಕ ಮಳೆ ಕಂಡ ಏಕೈಕ ಜಿಲ್ಲೆ ಉಡುಪಿ ಆಗಿದೆ.
ಈ ಮೂಲಕ ಉಡುಪಿ ಜಿಲ್ಲೆಯ ಹಿಂದಿನ ದಾಖಲೆಯೊಂದನ್ನು ಸಮ ಮಾಡಿಕೊಂಡಿದೆ. 2021 ರಲ್ಲಿ ಸುರಿದಿದ್ದ ಸರಾಸರಿ 5,245 ಮಿ.ಮೀ. ದಾಖಲೆಯನ್ನು ಈಗ ಸರಗಿಟ್ಟಿದೆ. ಹೀಗಾಗಿ ಉಡುಪಿ ಜಿಲ್ಲೆ ವಾಡಿಕೆಗಿಂತಲೂ ಈ ಬಾರಿ ಅತ್ಯಧಿಕ ಮಳೆ ಕಂಡಿದೆ. ಅಲ್ಲದೇ, ಹಲವು ಜಿಲ್ಲೆಗಳು ಕೂಡ ವಾಡಿಕೆಗಿಂತ ಹೆಚ್ಚು ಮಳೆ ಕಂಡಿವೆ. ಅಷ್ಟೇ ಅಲ್ಲದೇ, ಈ ಬಾರಿ ಬರೋಬ್ಬರಿ 28 ಜಿಲ್ಲೆಗಳು ವಾಡಿಕೆಗಿಂತ ಅತ್ಯಧಿಕ ಮಳೆ ಕಂಡಿವೆ.
ಫೆಂಗಲ್ ಚಂಡಮಾರುತ ಮತ್ತು ಎಲ್ ನಿನೋ ಪರಿಣಾಮದಿಂದ ಈ ಬಾರಿ ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ.
ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಪ್ರಮುಖ ಜಿಲ್ಲೆಗಳನ್ನು ನೋಡುವುದಾದರೆ, ಉಡುಪಿ 5,245 ಮಿ.ಮೀ.(ವಾಡಿಕೆ: 4,522 ಮಿ.ಮೀ., ಶೇ.16 ಹೆಚ್ಚಳ), ದಕ್ಷಿಣ ಕನ್ನಡ 4,629 ಮಿ.ಮೀ.(ವಾಡಿಕೆ: 3,993 ಮಿ.ಮೀ., ಶೇ.15.92 ಹೆಚ್ಚಳ), ಉತ್ತರ ಕನ್ನಡ: 3,894 ಮಿ.ಮೀ.(ವಾಡಿಕೆ: 2,930 ಮಿ.ಮೀ., ಶೇ.32.90 ಹೆಚ್ಚಳ), ಕೊಡಗು: 3,044 ಮಿ.ಮೀ.(ವಾಡಿಕೆ: 2,705 ಮಿ.ಮೀ., ಶೇ.12.53 ಹೆಚ್ಚಳ), ಶಿವಮೊಗ್ಗ: 2,676 ಮಿ.ಮೀ.(ವಾಡಿಕೆ: 2,317 ಮಿ.ಮೀ., ಶೇ.15.49 ಹೆಚ್ಚಳ) ಮಳೆಯಾಗಿದೆ. ಸದ್ಯ ರಾಜ್ಯದಲ್ಲಿ ಮಳೆ ಆಗುತ್ತಿಲ್ಲ. ಆದರೂ ಕರಾವಳಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗುತ್ತಿದೆ.