ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ. ಬುರುಡೆಗಾಗಿ ಇಲ್ಲಿಯವರೆಗೆ ಗುಂಡಿ ತೋಡಿದ್ದ ಎಸ್ ಐಟಿ ಈಗ ಅದರ ಹಿಂದೆ ಇದ್ದವರ ಬುರುಡೆ ಬಿಸಿ ಮಾಡುತ್ತಿದೆ.
ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಜನರು ಈಗ ಗೊಂದಲದಲ್ಲಿದ್ದಾರೆ. ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ತನಿಖೆ ವೇಳೆ ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ ಎನ್ನುವಂತಾಗಿದೆ. ಜಯಂತ್.ಟಿ ಬುರುಡೆ ನಾನು ಕೊಟ್ಟಿಲ್ಲ ಎಂದಿದ್ದರು. ಗಿರೀಶ್ ಮಟ್ಟೆಣ್ಣವರ ಕೂಡ ಹಾಗೆ ಹೇಳಿದ್ದು, ಈಗ ಸೌಜನ್ಯ ಮಾವ ವಿಠ್ಠಲ್ ಗೌಡ ಹೆಸರು ಮುನ್ನೆಲೆಗೆ ಬಂದಿದೆ. ಸತತ ನಾಲ್ಕೈದು ದಿನಗಳಿಂದ ಎಸ್ ಐಟಿ ಅಧಿಕಾರಿಗಳು ಬಾಯಿ ಬಿಡಿಸುವ ಕೆಲಸ ಮಾಡುತ್ತಿದ್ದಾರೆ.
ಧರ್ಮಸ್ಥಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿಗೆ ಬುರುಡೆ ಕಥೆ ಹಿಂದಿನ ಸ್ಫೋಟಕ ಮಾಹಿತಿಗಳೇ ಸಿಗುತ್ತಿವೆ. ಸೌಜನ್ಯ ಮಾವ ವಿಠ್ಠಲ್ಗೌಡನೇ ನಮಗೆ ಬುರುಡೆ ತಂದುಕೊಟ್ಟಿರುವುದು ಎಂದು ಗಿರೀಶ್ ಮಟ್ಟಣ್ಣನವರ್, ಎಸ್ಐಟಿ ಮುಂದೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದ್ದು, ಸದ್ಯ ಪ್ರಕರಣಕ್ಕೆ ಗಂಭೀರತೆ ಬರುವಂತೆ ಮಾಡಿದೆ.
ಸೌಜನ್ಯ ಮಾವ ವಿಠ್ಠಲ್ಗೌಡರೇ ಬುರುಡೆ ತಂದು ಕೊಟ್ಟಿದ್ದಾರೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ತೋರಿಸಿದ 11A ಸ್ಪಾಟ್ ನ ಸ್ವಲ್ಪ ದೂರದಲ್ಲಿಯೇ ಬುರುಡೆ ಸಿಕ್ಕಿದೆ. ಬಂಗ್ಲಗುಡ್ಡ ಕಾಡಿನಿಂದಲೇ ತಂದಿರುವ ಬುರುಡೆಯನ್ನು ನಮಗೆ ಕೊಟ್ಟಿದ್ದಾರೆ ಎಂದು ವಿಚಾರಣೆಯಲ್ಲಿ ಗಿರೀಶ್ ಮಟ್ಟಣ್ಣನವರ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಸೌಜನ್ಯ ಮಾವ ವಿಠ್ಠಲ್ ಗೌಡರ ವಿಚಾರಣೆ ಕೂಡ ನಡೆದಿದೆ. ಬುರುಡೆ ತಂದ ಜಾಗದಿಂದ ಕಾಡಿನಲ್ಲಿ ಅಸ್ಥಿಪಂಜರದ ಹುಡುಕಾಟ ಶುರುವಾಗಿದೆ ಎನ್ನಲಾಗಿದೆ.
ಕಳೆದ ವರ್ಷದಲ್ಲಿ ವಿಠ್ಠಲಗೌಡ ಬುರುಡೆ ತಂದಿದ್ದು, ಅಂದಿನಿಂದ ಈ ಗ್ಯಾಂಗ್ ಬಳಿ ಬುರುಡೆ ಇದೆ ಎಂಬುವುದು ಕೂಡ ಬಯಲಾಗಿದೆ. ಸದ್ಯ ಬರುಡೆ ಕಥೆಯ ಹಿಂದಿರುವವರನ್ನು ಎಸ್ ಐಟಿ ತನಿಖೆಗೆ ಒಳಪಡಿಸಿದೆ.



















