ಆರು ವರ್ಷದ ಹಿಂದಿನ ಪ್ರಕರಣವೊಂದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ದರ್ಶನ್ ಆಪ್ತ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ಕಾಣೆಯಾಗಿರುವ ಪ್ರಕರಣ ಕೂಡ ಈಗ ದರ್ಶನ್ ಸುತ್ತ ಸುತ್ತಿಕೊಂಡಿದೆ.
ಗದಗ ಮೂಲದ ಮಲ್ಲಿ, ದರ್ಶನ್ ಗೆ ಬಹಳ ಆಪ್ತರಾಗಿದ್ದರು. ಹಲವು ವರ್ಷಗಳ ಕಾಲ ದರ್ಶನ್ ಜೊತೆಗೇ ಇದ್ದ ಮಲ್ಲಿ, ಎಲ್ಲ ವ್ಯವಹಾರ ನೋಡಿಕೊಳ್ಳುತ್ತಿದ್ದರು. ದರ್ಶನ್ ಗೆ ಸಂಬಂಧಿಸಿದ ಹಣಕಾಸು ವ್ಯವಹಾರ, ತೂಗುದೀಪ ಡಿಸ್ಟ್ರಿಬ್ಯೂಟರ್ಸ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಆದರೆ, ಮಲ್ಲಿ 2018ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅವರು ಎಲ್ಲಿದ್ದಾರೆ ಎಂಬುವುದೇ ತಿಳಿದಿಲ್ಲ.
2011 ರಿಂದ 2018 ರವರೆಗೆ ದರ್ಶನ್ ಜೊತೆಗಿದ್ದ ಮಲ್ಲಿ, ದರ್ಶನ್ ಗೆ ಸುಮಾರು 10 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ್ದ ‘ಪ್ರೇಮ ಬರಹ’ ಸಿನಿಮಾದ ಬಿಡುಗಡೆ ನಂತರ ಮಲ್ಲಿ ತಮಗೆ ಒಂದು ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಈ ಪ್ರಕರಣದ ಬಳಿಕ ಮಲ್ಲಿಕಾರ್ಜುನ್ ಮೇಲೆ ದರ್ಶನ್ ಕೋಪಗೊಂಡಿದ್ದರು. ಅರ್ಜುನ್ ಸರ್ಜಾರಿಂದ ಪಡೆದ ಒಂದು ಕೋಟಿ ಮಾತ್ರ ಅಲ್ಲದೆ ಸುಮಾರು 10 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ಆರೋಪ ಕೇಳಿ ಬಂದಿತ್ತು.
2018 ರಲ್ಲಿ ಮಲ್ಲಿ ಕಾಣೆಯಾಗುವ ಮುನ್ನ ಅವರ ಒಂದು ಪತ್ರ ಬರೆದಿದ್ದರು ಎನ್ನಲಾಗುತ್ತಿದೆ. ಆದರೆ ಆ ಪತ್ರ ಎಲ್ಲಿದೆ ಎಂಬುದು ತಿಳಿದಿಲ್ಲ. ಈಗ ರೇಣುಕಾಸ್ವಾಮಿ ಪ್ರಕರಣದ ನಂತರ ಮಲ್ಲಿ ಪ್ರಕರಣ ಕೂಡ ಚರ್ಚೆಗೆ ಬಂದಿದೆ.
