ರಾಜ್ಯದ ಮಹತ್ವಾಕಾಂಕ್ಷೆ ಸುರಂಗ ಮಾರ್ಗಕ್ಕೆ ವಿಘ್ನ ಎದುರಾಗುತ್ತಿವೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿಯು ಬೆಂಗಳೂರು ಟ್ವಿನ್ ಟನಲ್ ಪ್ರಾಜೆಕ್ಟ್ ಯೋಜನೆಗೆ ಕೈ ಹಾಕಿತ್ತು. ಈ ಮೂಲಕ ಬೆಂಗಳೂರಿನ ಉತ್ತರ ದಿಕ್ಕಿನಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಕಾರಿಡರ್ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿತ್ತು. ಈ ಯೋಜನೆಯ ಸಾಕಾರಕ್ಕಾಗಿ ಖಾಸಗಿ ಬ್ಯಾಂಕ್ ಗಳ ಮೂಲಕ 19 ಸಾವಿರ ಕೋಟಿ ರೂ. ಸಾಲ ಪಡೆಯಲು ಕೂಡ ಮುಂದಾಗಿತ್ತು. ಆದರೆ, ಈಗ ಸರ್ಕಾರವೇ ಯೋಜನೆ ಬದಲಾಯಿಸಿದ್ದು, ಮೊದಲ ಹಂತದಲ್ಲಿ ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ ಮಾತ್ರ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗಿದೆ.
ಹೀಗಾಗಿ ಬಿಬಿಎಂಪಿಯು 8 ಸಾವಿರ ಕೋಟಿ ಸಾಲಕ್ಕೆ ಮುಂದಾಗಿದೆ. ಈಗಾಗಲೇ ಸಾಲಕ್ಕಾಗಿ ಖಾಸಗಿ ಬ್ಯಾಂಕ್ ಗಳ ಮುಂದೆ ಕೈ ಚಾಚಿದೆ. ಈ ಸುರಂಗ ಮಾರ್ಗ ಸುಮಾರು 18.5 ಕಿ.ಮೀ ಉದ್ದದ ಟನಲ್ ರಸ್ತೆಯಾಗಿದೆ. 8 ಸಾವಿರ ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುವುದು. ಹೆಬ್ಬಾಳ ಎಸ್ಟಿಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಈ ಸುರಂಗ ಮಾರ್ಗ ಸಿದ್ಧವಾಗಲಿದೆ. ಒಟ್ಟು 3 ಲೈನ್ ಟ್ವಿನ್ ಟನಲ್ ರಸ್ತೆಗಳಿರುತ್ತವೆ. ಹೆಬ್ಬಾಳ ದಿಂದ ಮೇಖ್ರಿ ಸರ್ಕಲ್, ಅರಮನೆ ರಸ್ತೆ, ರೇಸ್ ಕೋರ್ಸ್, ಚಾಲುಕ್ಯ ಸರ್ಕಲ್, ಕಬ್ಬನ್ ಪಾರ್ಕ್, ಲಾಲ್ ಬಾಗ್, ಕೆ.ಎಚ್ ರಸ್ತೆ, ಜಯನಗರ ಮಾರ್ಗವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಕಾರಿಡಾರ್ ಸಿದ್ಧವಾಗಲಿದೆ.