ತಾಪಂ, ಜಿಪಂ ಸೇರಿದಂತೆ ಎಲ್ಲ ರೀತಿಯ ಸ್ಥಳೀಯ ಸಂಸ್ಥೆಗಳಿಗೆ ಸದ್ಯದಲ್ಲಿಯೇ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ನೂತನ ಆಯುಕ್ತ ಜಿ.ಎಸ್ ಸಂಗ್ರೇಶಿ ತಿಳಿಸಿದ್ದಾರೆ.
ಮೈಸೂರಿನ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿನ್ನೆಯಷ್ಟೇ ಆಯೋಗದ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಸಾಕಷ್ಟು ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆಯುವ ಕುರಿತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ವ್ಯಾಜ್ಯಗಳು ಇವೆ. ಅಲ್ಲದೇ, ನ್ಯಾಯಾಲಯಗಳಲ್ಲಿ ಜಾತಿ ಮೀಸಲು ಪಟ್ಟಿ ಪ್ರಕಟ, ವಾರ್ಡ್ ಮರು ವಿಂಗಡಣೆಯಂತಹ ವ್ಯಾಜ್ಯಗಳಿವೆ. ಆ ಸಮಸ್ಯೆಗಳನ್ನು ಸದ್ಯದಲ್ಲಿಯೇ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ತಾಪಂ, ಜಿಪಂ ಹಾಗೂ ಬಿಬಿಎಂಪಿಗೆ ನಾಲ್ಕು ವರ್ಷಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಆದರೆ ಕೋರ್ಟ್ ನಲ್ಲಿ ವ್ಯಾಜ್ಯಗಳಿರುವುದರಿಂದಾಗಿ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಆದಷ್ಟು ಬೇಗ ಚುನಾವಣೆ ನಡೆಸಲಾಗುವುದು. ಜುಲೈ 30 ರಂದು ಬಿಬಿಎಂಪಿ ಚುನಾವಣೆ ಕುರಿತು ಸುಪ್ರೀಂ ಕೋರ್ಟ್ ನ ತೀರ್ಪು ಬರಲಿದ್ದು, ತೀರ್ಪಿನ ನಂತರ ಚುನಾವಣೆ ನಡೆಸುವ ಸಂಬಂಧ ಆಯೋಗ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಸದ್ಯದಲ್ಲಿಯೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.