ಬೆಂಗಳೂರು : ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಗ್ಯಾರಂಟಿಗಳಿಗೆ ಗ್ರಹಣ ಹಿಡಿದಂತಾಗಿದೆ. ಸರ್ಕಾರದ ಬಳಿ ಸಮರ್ಪಕ ಅನುದಾನ ಇಲ್ಲದ ಹಿನ್ನೆಲೆಯಲ್ಲಿ ಗ್ಯಾರಂಟಿ ಭರವಸೆ ಈಡೇರಿಸಲು ಹೆಣಗಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಗೃಹ ಲಕ್ಷ್ಮೀ ಯೋಜನೆಯಡಿ ಮಹಿಳೆಯರ ಖಾತೆಗೆ ಹಣ ಸಂದಾಯವಾಗುತ್ತಿಲ್ಲ. ಹೀಗಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಹೀಗಾಗಿ ಗೃಹಲಕ್ಷ್ಮೀಯ ಹಣ ಹಾಕುವುದು ವಿಳಂಬವಾಗಿದೆ. ಆದರೂ ನಾನು ಫೈನಾನ್ಸ್ ಇಲಾಖೆಗೆ ಒತ್ತಡ ಹಾಕುತ್ತಿದ್ದೆ. ಮುಖ್ಯಮಂತ್ರಿ ಗಮನಕ್ಕೆ ತರುತ್ತಿದ್ದೆ. ಇನ್ನೊಂದು ವಾರದಲ್ಲಿ ಪ್ರತಿಯೊಬ್ಬ ಫಲಾನುಭವಿಯ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ತಾಲೂಕು ಪಂಚಾಯಿತಿ ವತಿಯಿಂದ ಬಿಡುಗಡೆ ಮಾಡುತ್ತೇವೆ. ನಾನು ಕೂಡ ಬಜೆಟ್ ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಈ ಬಗ್ಗೆ ಚರ್ಚೆ ಮಾಡಿ ಮೂರು ತಿಂಗಳ ದುಡ್ಡನ್ನು ಹಾಕಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಎಲ್ಲಾ ಗೃಹಲಕ್ಷ್ಮಿಯರಿಗೆ ಖಂಡಿತವಾಗಿಯೂ ಅವರ ಹಣ ತಲುಪುತ್ತದೆ. ಮೂರು ತಿಂಗಳ ಹಣವನ್ನು ಒಂದು ರೂ. ಬಾಕಿ ಇಟ್ಟುಕೊಳ್ಳದೆ ಹಾಕುವುದಾಗಿ ಭರವಸೆ ನೀಡಿದ್ದಾರೆ.