ಬೆಂಗಳೂರು: ಅಪ್ಪು 50ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ನೋವಿನಲ್ಲೇ ಸೋಮವಾರ ಮುಗಿಸಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಗೆ ಅಪ್ಪು ಬಗ್ಗೆ ಮತ್ತೊಂದು ಅಪ್ಡೇಟ್ ಸಿಕ್ಕಿದೆ.
ಅಪ್ಪು ಅಮರರಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಪ್ಪು ಅವರ ಜೀವನ ಚರಿತ್ರೆ ಹೊರ ತರಲು ತಯಾರಿ ನಡೆಸುತ್ತಿದ್ದಾರೆ. ರಾಜ್ಕುಮಾರ್ ಅವರ ಬಗ್ಗೆ ಪುನೀತ್ ರಾಜ್ಕುಮಾರ್ ಬರೆದಿರುವ ಅಪರೂಪದ ಪುಸ್ತಕದ ಬಗ್ಗೆ ಹಲವರಿಗೆ ಗೊತ್ತೇ ಇದೆ. ಆ ಪುಸ್ತಕವನ್ನು ಪುನೀತ್ ರಾಜ್ಕುಮಾರ್ ಮತ್ತು ಪ್ರಕೃತಿ ಬನವಾಸಿ ಒಟ್ಟಿಗೆ ಸಂಪಾದಿಸಿದ್ದರು. ಇದೀಗ ಅಪ್ಪು ಅವರ ಬಯೋಗ್ರಫಿ ಅನ್ನು ಅದೇ ಪ್ರಕೃತಿ ಬನವಾಸಿ ಅವರು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರೊಟ್ಟಿಗೆ ಸೇರಿ ಬರೆಯುತ್ತಿದ್ದಾರೆ. ಬಯೋಗ್ರಫಿಯನ್ನು ಅಶ್ವಿನಿ ಮತ್ತು ಬನವಾಸಿ ಅವರು ಜಂಟಿಯಾಗಿ ಸಂಪಾದಿಸಿದ್ದಾರೆ ಎನ್ನಲಾಗಿದೆ.
ಬಯೋಗ್ರಫಿಯಲ್ಲಿ ಸುಮಾರು 225 ಮಂದಿ ನಟರು, ತಂತ್ರಜ್ಞರು ಅಪ್ಪುಗೆ ಸಂಬಂಧಸಿದವರು ಮಾತನಾಡಿದ್ದಾರೆ ಅಥವಾ ಲೇಖನಗಳನ್ನು ಬರೆದಿದ್ದಾರೆ. ಎರಡು ವರ್ಷದಿಂದಲೂ ಕೆಲಸ ಮಾಡುತ್ತಿರುವುದಾಗಿ ಪ್ರಕೃತಿ ಬನವಾಸಿ ಹೇಳಿದ್ದಾರೆ.
ಅಪ್ಪು ಅವರ ಬಗ್ಗೆ ಎಲ್ಲೂ ಮಾತನಾಡದ ಹಲವರು ಈ ಪುಸ್ತಕಕ್ಕಾಗಿ ಲೇಖನಗಳನ್ನು ನೀಡಿದ್ದಾರೆ. ಅಪ್ಪು ಅವರ ಜೀವನದಲ್ಲಿ ನಡೆದ ಹಲವಾರು ಘಟನೆಗಳು, ಅವರು ಆಡಿದ ಮಾತುಗಳು, ನಂಬಿದ ಆದರ್ಶ ಇನ್ನೂ ಹಲವು ವಿಷಯಗಳನ್ನು ಪುಸ್ತಕ ಒಳಗೊಂಡಿರಲಿದೆ ಎಂದು ತಿಳಿದು ಬಂದಿದೆ. ಆದಷ್ಟು ಬೇಗ ಅಪ್ಪು ಬಯೋಗ್ರಫಿ ಹೊರ ಬರಲಿ ಎಂದು ಈಗ ಅಭಿಮಾನಿಗಳು ಬಯಸುತ್ತಿದ್ದಾರೆ.