ಬೆಂಗಳೂರು: “ಅನಾಮಧೇಯ ಅಶೋಕ್ ಕುಮಾರ್” ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲು ಸಜ್ಜಾಗಿ ನಿಂತಿದೆ. ಎಸ್ ಕೆಎನ್ ಫಿಲಂಸ್ ಲಾಂಛನದಲ್ಲಿ ನಿರ್ಮಲಾ ಕುಮಾರ್ ಹಾಗೂ ರಮ್ಯಾ ಸಾಗರ್ ಕುಮಾರ್ ನಿರ್ಮಿಸಿರುವ ಈ ಚಿತ್ರ ಈಗಾಗಲೇ ಸದ್ದು ಮಾಡುತ್ತಿದೆ.

ಕಿಶೋರ್ ಕುಮಾರ್ ಹಾಗೂ “ಆಚಾರ್ & ಕೋ” ಚಿತ್ರದ ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಿಶೋರ್ ಕುಮಾರ್ ಸಹ ನಿರ್ಮಾಣವಿರುವ ಹಾಗೂ ಸಾಗರ್ ಕುಮಾರ್ ನಿರ್ದೇಶನದ “ಅನಾಮಧೇಯ ಅಶೋಕ್ ಕುಮಾರ್” ಚಿತ್ರ ಫೆಬ್ರವರಿ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ.

ಬಿಡುಗಡೆಯ ವಿಷಯವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಾಗರ್ ಕುಮಾರ್, ಚಿತ್ರ ತಂಡ ಮಾಹಿತಿ ನೀಡಿದೆ. ಮೂಲತಃ ಐಟಿ ಉದ್ಯೋಗಿಯಾಗಿರುವ ನಾನು, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ದೇಶದಲ್ಲಿ ನಡೆದ ಕೆಲವು ಕ್ರೈಮ್ ಫಟನೆಗಳು ಹಾಗೂ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಬರೆದ ಪುಸ್ತಕ ಈ ಚಿತ್ರದ ಕಥೆಗೆ ಸ್ಪೂರ್ತಿ ಎಂದಿದ್ದಾರೆ.

ಈ ಚಿತ್ರದಲ್ಲಿ ಕಿಶೋರ್ ಕುಮಾರ್ ಪತ್ರಕರ್ತನ ಪಾತ್ರದಲ್ಲಿ ಹಾಗೂ ಹರ್ಷಿಲ್ ಕೌಶಿಕ್ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧೀಂದ್ರ ನಾಯರ್, ಕಾಂತರಾಜ್ ಕಡ್ಡಿಪುಡಿ, ವೀರೇಶ್ ಸೇರಿದಂತೆ ಹಲವರು ನಟಿಸಿದ್ದಾರೆ.
ನಟ ಕಿಶೋರ್ ಕುಮಾರ್ ಮಾತನಾಡಿ, ಈ ಚಿತ್ರದಲ್ಲಿ ಪತ್ರಕರ್ತನಾಗಿ ಅಭಿನಯಿಸಿದ್ದೇನೆ. “ಅನಾಮಧೇಯ” ಎಂದರೆ ಹೆಸರಿಲ್ಲದವನು ಎಂದು. ನಮ್ಮ ಚಿತ್ರದಲ್ಲಿ “ಅನಾಮಧೇಯ ಅಶೋಕ್ ಕುಮಾರ್”ಯಾರು? ಎಂಬ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಅದು ಯಾರು ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು ಎಂದಿದ್ದಾರೆ.