ಐಪಿಎಲ್ 2025ರ ಆವೃತ್ತಿಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಸದ್ಯದಲ್ಲಿಯೇ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ 10 ಫ್ರಾಂಚೈಸಿಗಳಿಗೆ ಕೆಲವು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಸದ್ಯ ರಿಟೈನ್ ಗಾಗಿ ದಿನಾಂಕ ನಿಗದಿ ಮಾಡಲಾಗಿದೆ.
ರಿಟೈನ್ ಮಾಡಿಕೊಳ್ಳಲು ಕೆಲ ನಿಬಂಧನೆಗಳಿರುತ್ತವೆ. ಆ ನಿಬಂಧನೆಗಳೇನು ಎಂಬುವುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಸದ್ಯದಲ್ಲಿಯೇ ನಿಬಂಧನೆಗಳು ಬಹಿರಂಗವಾಗಲಿವೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 29 ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ನಂತರ ಮೆಗಾ ಹರಾಜು ನಿಯಮ ಘೋಷನೆಯಾಗುವುದು ನಿಶ್ಚಿತ ಎನ್ನಲಾಗುತ್ತಿದೆ.

ಈ ತಿಂಗಳ ಅಂತ್ಯದಲ್ಲಿ ಐಪಿಎಲ್ ರಿಟೈನ್ ನಿಯಮ ಜಾರಿಯಾಗಲಿದೆ. ಇದಾದ ನಂತರ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನವೆಂಬರ್ 15ರ ವರೆಗೆ ಗಡುವು ನೀಡಲಾಗುತ್ತದೆ. ಅದರೊಳಗೆ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ರಿಲೀಸ್ ಆದ ಆಟಗಾರರು ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ 15 ರೊಳಗೆ ರಿಟೈನ್ ಪಟ್ಟಿಯನ್ನು ಸಲ್ಲಿಸಬೇಕಿರುವುದರಿಂದ ಡಿಸೆಂಬರ್ ತಿಂಗಳಲ್ಲಿ ಮೆಗಾ ಹರಾಜು ನಡೆಯುವುದು ನಿಶ್ಚಿತ ಎನ್ನಲಾಗುತ್ತಿದೆ. ಹೀಗಾಗಿ ವರ್ಷಾಂತ್ಯದೊಳಗೆ ಐಪಿಎಲ್ ಸೀಸನ್ 18ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಸಂಪೂರ್ಣ ಆಟಗಾರರ ಪಟ್ಟಿ ಕೂಡ ಹೊರಬೀಳುವ ಸಾಧ್ಯತೆ ಇದೆ.
ಸದ್ಯದ ಮಾಹಿತಿಯಂತೆ ಮೆಗಾ ಹರಾಜಿಗೂ ಮುನ್ನ 4 ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ನಾಲ್ವರನ್ನು ರಿಟೈನ್ ಮಾಡಿಕೊಂಡರೆ, ಇಬ್ಬರ ಮೇಲೆ ಆರ್ ಟಿಎಂ ಆಯ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಸದ್ಯದಲ್ಲಿಯೇ ಖಚಿತ ಮಾಹಿತಿ ಹೊರ ಬೀಳಲಿದೆ.