ಕಳ್ಳನೊಬ್ಬ ತಾನು ಕಳ್ಳತನ ಮಾಡಿರುವುದು ಕವಿಯ ಮನೆಯಲ್ಲಿ ಎಂಬುವುದು ಗೊತ್ತಾಗುತ್ತಿದ್ದಂತೆ ಕ್ಷಮೆ ಕೇಳಿ ಮರಳಿ ನೀಡಿರುವ ಘಟನೆ ನಡೆದಿದೆ.
ಕಳ್ಳನೊಬ್ಬ ಕ್ಷಮೆ ಕೋರಿ ಕದ್ದಿರುವ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿರುವ ಈ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ನೇರಲ್ ನಲ್ಲಿ ನಡೆದಿದೆ. 2010ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾಗಿದ್ದ ಖ್ಯಾತ ಕವಿ ನಾರಾಯಣ ಸುರ್ವೆ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ.
ಮಗಳು ಸುಜಾತಾ ಮತ್ತು ಅವರ ಪತಿ ಗಣೇಶ್ ಘರೆ ಈಗ ಆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಈ ದಂಪತಿ ವಿರಾರ್ ನಲ್ಲಿರುವ ತಮ್ಮ ಮಗನನ್ನು ಭೇಟಿ ಮಾಡಲು ಸುಮಾರು 10 ದಿನಗಳ ಕಾಲ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಕಳ್ಳ ಎಲ್ ಇಡಿ ಟಿವಿ ಸೆಟ್ ಸೇರಿದಂತೆ ಕೆಲವು ವಸ್ತುಗಳನ್ನು ದೋಚಿದ್ದ. ಮರುದಿನ ಇನ್ನೂ ಕೆಲವು ವಸ್ತುಗಳನ್ನು ತೆಗೆದುಕೊಳ್ಳಲು ಹಿಂತಿರುಗಿದಾಗ, ಆತ ಕೋಣೆಯಲ್ಲಿ ಸುರ್ವೆ ಅವರ ಫೋಟೋ ಮತ್ತು ಸ್ಮರಣಿಕೆಗಳನ್ನು ನೋಡಿದ್ದಾನೆ.
ಆನಂತರ ಆತನಿಗೆ ಪಶ್ಚಾತಾಪವಾಗಿದೆ. ಕೂಡಲೇ ತಾನು ಕಳ್ಳತನ ಮಾಡಿದ್ದ ಎಲ್ಲ ವಸ್ತುಗಳನ್ನು ಮರಳಿ ತಂದು ಇಟ್ಟು, ಕ್ಷಮಾಪಣಾ ಪತ್ರವನ್ನು ಕೂಡ ಅಲ್ಲಿರಿಸಿ ಹೋಗಿದ್ದಾನೆ. ಸುಜಾತಾ ಮತ್ತು ಅವರ ಪತಿ ಭಾನುವಾರ ವಿರಾರ್‌ನಿಂದ ಹಿಂದಿರುಗಿದಾಗ ಚೀಟಿ ಸಿಕ್ಕಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಟಿವಿ ಮೇಲೆ ಕಂಡುಬಂದ ಬೆರಳಚ್ಚು ಮತ್ತು ಇತರ ಆಧಾರದ ಮೇಲೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.