ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ವಿತ್ ಡ್ರಾ ಮಾಡುವುದು ಸೇರಿ ಕೇಂದ್ರ ಸರ್ಕಾರ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದೆ. ಅದರಲ್ಲೂ, ಎಟಿಎಂಗಳಿಂದ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡುವುದು ಪ್ರಮುಖ ನಿರ್ಧಾರವಾಗಿದೆ. ಎಟಿಎಂ ಮೂಲಕ ಹಣದ ವಿತ್ ಡ್ರಾ ಸೇರಿ ಹಲವು ಮಹತ್ವದ ಸುಧಾರಣೆಗಳು ಇರುವ ಇಪಿಎಫ್ಒ 3.0 ಯೋಜನೆ ಜಾರಿ ಕುರಿತು ಕೇಂದ್ರ ಸರ್ಕಾರ ಮಹತ್ವದ ಅಪ್ ಡೇಟ್ ನೀಡಿದೆ.
ಹೌದು, ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಂಡಾವೀಯ ಅವರು ಇಪಿಎಫ್ಒ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. “ಕೆಲವೇ ದಿನಗಳಲ್ಲಿ ಇಪಿಎಫ್ಒ 3.0 ಯೋಜನೆ ಜಾರಿಗೆ ಬರಲಿದೆ. ಇದರಿಂದ ಗ್ರಾಹಕರು ಪಿಎಫ್ ಮೊತ್ತವನ್ನು ಎಟಿಎಂಗಳಿಂದಲೇ ವಿತ್ ಡ್ರಾ ಮಾಡಬಹುದಾಗಿದೆ. ಇದರ ಜತೆಗೆ ಹಲವು ಸುಧಾರಣಾ ಕ್ರಮಗಳು ಕೂಡ ಅಡಕವಾಗಿವೆ” ಎಂದು ತಿಳಿಸಿದ್ದಾರೆ.
“ಪಿಎಫ್ ಖಾತೆಯಲ್ಲಿರುವುದು ಜನರ ದುಡ್ಡು. ಜನರು ತಮಗೆ ಬೇಕಾದಾಗ ಆ ದುಡ್ಡನ್ನು ವಿತ್ ಡ್ರಾ ಮಾಡಬಹುದು. ಇದರ ದಿಸೆಯಲ್ಲಿಯೇ ಎಟಿಎಂಗಳ ಮೂಲಕ ಹಣವನ್ನು ವಿತ್ ಡ್ರಾ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಸಾರ್ವಜನಿಕರ ಬಳಿಕ ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್) ಇದ್ದರೆ ಸಾಕು, ಎಟಿಎಂಗಳ ಮೂಲಕ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯಲ್ಲಿ (ಇಪಿಎಫ್ಒ) ಸುಮಾರು 7.4 ಕೋಟಿ ಸದಸ್ಯರಿದ್ದಾರೆ. ಇಪಿಎಫ್ಒ 3.0 ಜಾರಿಗೆ ಬಂದರೆ ಇವರೆಲ್ಲರೂ ಪಿಎಫ್ ಮೊತ್ತವನ್ನು ಸುಲಭವಾಗಿ ವಿತ್ ಡ್ರಾ ಮಾಡಬಹುದಾಗಿದೆ. ಇಪಿಎಫ್ಒ ಕಚೇರಿಗಳಿಗೆ ಅಲೆದಾಡುವ, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಹಲವು ದಿನ ಕಾಯುವ ಗೊಡವೆಯೇ ಇರದ ವ್ಯವಸ್ಥೆ ಜಾರಿಗೆ ಸರ್ಕಾರ ಮುಂದಾಗಿದೆ.