ದೆಹಲಿ ಸಿಎಂ ಹಾಗೂ ಮದ್ಯ ಹಗರದ ಪ್ರಮುಖ ಆರೋಪಿ ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆ ಹೋರಾಟದ ಜೇನನ್ನೇ ಹೀರಿ, ಪಕ್ಷ ಕಟ್ಟಿ ಈಗ ಅಧಿಕಾರದ ರುಚಿ ಸವಿಯುತ್ತಿದ್ದಾರೆ. ಅಧಿಕಾರದ ದಾಹಕ್ಕೆ ಸಿಲುಕಿ ಭ್ರಷ್ಟಾಚಾರದ ಸುಳಿಯಲ್ಲಿಯೂ ಸುಲಿಕಿದ್ದಾರೆ. ಈ ಮಧ್ಯೆ ಒಂದು ಕಾಲದಲ್ಲಿ ಶಿಷ್ಯನಾಗಿದ್ದ ಕೇಜ್ರಿವಾಲ್ ವಿರುದ್ಧ ಅಣ್ಣಾ ಹಜಾರೆ ಬಹಿರಂಗವಾಗಿಯೇ ಗುಡುಗಿರುವುದು ಎಲ್ಲರಿಗೂ ಗೊತ್ತೇ ಇದೆ. ಭ್ರಷ್ಟರಿಗೆ ಮತ ಹಾಕಬೇಡಿ ಎಂದು ಜನರಿಗೆ ಹಜಾರೆ, ಮನವಿ ಮಾಡಿದ್ದಾರೆ. ಅಣ್ಣಾ ಹಜಾರೆ ಅಷ್ಟೇ ಅಲ್ಲದೇ, ಒಂದು ಕಾಲದಲ್ಲಿ ಲೋಕಪಾಲ್ ಹೋರಾಟಕ್ಕೆ ಕೇಜ್ರಿವಾಲ್ ಜೊತೆ ಕೈ ಜೋಡಿಸಿದ್ದವರೂ ಕೇಜ್ರಿವಾಲ್ ಸಹವಾಸ ಬಿಟ್ಟಿರುವುದು, ಸದ್ಯ ಕೇಜ್ರಿವಾಲ್ ಚಾರಿತ್ರ್ಯಕ್ಕೆ ಹಿಡಿದ ಕನ್ನಡಿಯಾಗುತ್ತಿರುವುದು ಸುಳ್ಳಲ್ಲ..
ಉದ್ದಿಮೆ ಕ್ಯಾಪ್ಟನ್ ಗೋಪಿನಾಥ್ ಅವರು ಒಂದು ಕಾಲದಲ್ಲಿ ಕೇಜ್ರಿವಾಲ್ ಆಪ್ತ ವಲಯದಲ್ಲಿ ಪ್ರಮುಖರಾಗಿದ್ದವರು. ಕಳೆದ ಬಾರಿಯ ಲೋಕಸಭೆ ಚುನಾವಣೆಯ ನಂತರ ಆಪ್ ಹಾಗೂ ಕೇಜ್ರಿವಾಲ್ ಸ್ನೇಹದಿಂದ ದೂರವಾದವರು. ಇದು ಪಕ್ಷಕ್ಕೆ ಆಗ ದೊಡ್ಡ ಆಘಾತವನ್ನೇ ನೀಡಿತು. ಆಪ್ ಸಿದ್ಧಾಂತ ತೊರೆದು ಹೊರಟಿದೆ ಎಂಬ ಅಸಮಾಧಾನವನ್ನು ಅವರು ಹೊರ ಹಾಕಿದ್ದರು.
ವಿನೋದ್ ಕುಮಾರ್ ಬಿನ್ನಿ ಅವರನ್ನು ಪಕ್ಷವೇ ಉಚ್ಛಾಟಿಸಿತ್ತು. ಏಕೆಂದರೆ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದರು. ಪಕ್ಷವು ಜನರಿಗೆ ದ್ರೋಹ ಮಾಡುತ್ತಿದೆ ಎಂದು ಖಡಾಖಂಡಿತವಾಗಿ ಆರೋಪಿಸಿದ್ದರು. ಹೀಗಾಗಿಯೇ ಅವರನ್ನು ಪಕ್ಷ ಉಚ್ಛಾಟನೆ ಮಾಡುವುದರ ಮೂಲಕ ನಾಯಕನ ಧ್ವನಿ ಹತ್ತಿಕ್ಕುವ ಕಾರ್ಯ ಮಾಡಿತ್ತು.
ಎಸ್ಪಿ ಉದಯಕುಮಾರ್ ಆಪ್ ಪಕ್ಷವನ್ನು ದಕ್ಷಿಣಕ್ಕೆ ಹರಡಲು ಪ್ರಮುಖ ಪಾತ್ರ ವಹಿಸುವ ಕಾರ್ಯ ಮಾಡುತ್ತಿದ್ದರು. ದಕ್ಷಿಣ ಭಾರತದಲ್ಲಿ ಆಪ್ ಗೆ ಅಡ್ರೆಸ್ ಸಿಕ್ಕಿದೆ ಎಂದರೆ ಅದರಲ್ಲಿ ಇವರ ಪಾತ್ರ ಬಹುಮುಖ್ಯವಾಗಿತ್ತು. ಆದರೆ, ಇವರನ್ನು ಕೇಜ್ರಿವಾಲ್ ನಡೆಸಿಕೊಂಡ ರೀತಿಯಿಂದಾಗಿ ಅವರು ಪಕ್ಷ ತೊರೆದರು. ತಮಿಳುನಾಡಿಗೆ ಸಂಬಂಧಿಸಿದ ಜನರು ಮತ್ತು ಸಮಸ್ಯೆಗಳಿಗೆ ಪಕ್ಷವು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಸದ್ಯ ಅವರು ಬಿಜೆಪಿ ಸೇರಿದ್ದಾರೆ.
ಎಂಎಸ್ ಧೀರ್ ಆಪ್ ನ ಮಾಜಿ ಶಾಸಕ ಹಾಗೂ ದೆಹಲಿಯ ವಿಧಾನಸಭೆಯ ಸ್ಪೀಕರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದವರು. ಅವರು ಇತ್ತೀಚೆಗಷ್ಟೇ ಆಪ್ ನ ಪೊರಕೆಯನ್ನು ಮೂಲೆಗೆ ಸರಿಸಿದ್ದಾರೆ. ಅವರು ಕೇಜ್ರಿವಾಲ್ ದೆಹಲಿ ಆಳಲು ಯೋಗ್ಯರಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಇದಷ್ಟೇ ಅಲ್ಲ, ಹಿರಿಯ ನಾಯಕರೊಂದಿಗೆ ಆಪ್ ನ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಸಾಕಷ್ಟು ಕಲಹಗಳು ಕೂಡ ಹೊರ ಬಿದ್ದಿವೆ. ಆಪ್ ನ ಅತ್ಯಂತ ಪ್ರಬುದ್ಧ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಪತ್ರಕರ್ತೆ-ರಾಜಕಾರಣಿಯು ಎಎಪಿಯೊಂದಿಗಿನ ತನ್ನ ಸಂಕ್ಷಿಪ್ತ ಅವಧಿಯಲ್ಲಿ ಹಲವಾರು ವಿವಾದಗಳಿಗೆ ಸಿಲುಕಿ, ಆಪ್ ಪಕ್ಷದ ಟಿವಿ ಮುಖವಾಗಿದ್ದರು. ಆದರೆ, ಅಂಥವರೇ ಇತ್ತೀಚೆಗೆ ಪಕ್ಷ ತೊರೆದಿದ್ದಾರೆ. ಪಕ್ಷದ ನಾಯಕರು ವಿಶ್ವಾಸಕ್ಕೆ ಅರ್ಹರಲ್ಲ ಹಾಗೂ ವಿಶ್ವಾಸದಿಂದ ಯಾರನ್ನೂ ಕಾಣುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ಮಧು ಭಾದುರಿ ಅವರು ಮಹಿಳಾ ನಾಯಕರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಮಹಿಳೆಯರು ಕೂಡ ಮನುಷ್ಯರು. ಈ ಪಕ್ಷದಲ್ಲಿ, ಮಹಿಳೆಯರನ್ನು ಮನುಷ್ಯರು ಎಂದು ಪರಿಗಣಿಸಲಾಗುವುದಿಲ್ಲ ಎಂದು ಆಪ್ ನ ನಾಯಕತ್ವದ ಕುರಿತು ಬಹಿರಂಗವಾಗಿಯೇ ವಾಗ್ದಾಳಿ ನಡೆಸಿ ಹೊರ ನಡೆದಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತಹ ಘಟನೆಯೊಂದು ಇತ್ತೀಚೆಗೆ ನಡೆದಿದೆ. ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮೇಲೆ ಕೇಜ್ರಿವಾಲ್ ನಿವಾಸದಲ್ಲಿಯೇ ಅನುಚಿತವಾಗಿ ವರ್ತಿಸಲಾಗಿದೆ. ಕೇಜ್ರಿವಾಲ್ ಪಿಎ ವಿಭವ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎಂದು ಪಕ್ಷದ ಸಂಸದರೇ ಆರೋಪಿಸಿದ್ದಾರೆ. ಪಕ್ಷದ ಸಂಸದ ಸಂಜಯ್ ಸಿಂಗ್ ಬಹಿರಂಗವಾಗಿ ಆರೋಪಿಸಿದ್ದು ಕೂಡ ಕೇಜ್ರಿವಾಲ್ ಚೇಲಾಗಳು ಮಹಿಳೆಯರೊಂದಿಗೆ ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುವುದನ್ನು ಕಾಣಬಹುದಾಗಿದೆ.
ಎಎಪಿ ರಾಷ್ಟ್ರೀಯ ಮಂಡಳಿಯ ಸದಸ್ಯ ಮೌಲಾನಾ ಕಾಜ್ಮಿ, ಅರವಿಂದ್ ಕೇಜ್ರಿವಾಲ್ ಮುಖವಾಡದ ಮನುಷ್ಯ ಎಂದು ಜರಿದು ರಾಜೀನಾಮೆ ನೀಡಿದ್ದಾರೆ. ಆಪ್ ನ ಸದಸ್ಯರಾದ ಸಹ್ಲೀಲ್ ಕುಮಾರ್, ರಾಜೇಶ್ ಗುಪ್ತಾ ಮತ್ತು ಕರ್ನಲ್ ಎಸ್‌ಸಿ ತಲ್ವಾರ್ ಉಪಾಧ್ಯಾಯ ಈಗಾಗಲೇ ಬಿಜೆಪಿ ಸೇರಿದ್ದಾರೆ. ಕೇವಲ ಇವರಷ್ಟೇ ನಾಯಕರು ಕೇಜ್ರಿವಾಲ್ ಸಹಸವಾಸದಿಂದ ದೂರವಾಗಿಲ್ಲ….ಇನ್ನೂ ಹಲವಾರು ಪ್ರಮುಖ ನಾಯಕರು ಕೇಜ್ರಿವಾಲ್ ಸಹವಾಸ ತೊರೆದಿದ್ದಾರೆ. ಬಾತ್ರಾ (ಪಿವಿಸಿ ವಿಕ್ರಮ್ ಬಾತ್ರಾ ಅವರ ತಾಯಿ), ಅಶೋಕ್ ಅಗರ್ವಾಲ್ (ಸ್ಥಾಪಕ ಸದಸ್ಯ),
ಅಶ್ವಿನಿ ಉಪಾಧ್ಯಾಯ(ಸ್ಥಾಪಕ ಸದಸ್ಯ), ಅಶೋಕ್ ಪಂಡಿತ್ (ಚಲನಚಿತ್ರ ನಿರ್ಮಾಪಕ), ರಾಜೇಶ್ ಗಾರ್ಗ್,
ಮೇಧಾ ಪಾಟ್ಕರ್( ಸಮಾಜ ಸೇವಕಿ), ಅಂಜಲಿ ದಮನೀಯ, ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಂತಿ ಭೂಷಣ, ಮಯಾಂಕ್ ಗಾಂಧಿ ಸೇರಿದಂತೆ ಹಲವಾರು ನಾಯಕರು ಪಕ್ಷ ತೊರೆದಿದ್ದಾರೆ.
ಸ್ವರಾಜ್ ಕೇವಲ ಎಎಪಿ ಸದಸ್ಯರು ಧರಿಸುವ ಟೋಪಿಗೆ ಮಾತ್ರ ಸೀಮಿತವಾಗಿದೆ. ಆದರೆ, ವ್ಯವಸ್ತೆಯು ನಿರಂಕುಶಾಧಿಕಾರವಾಗಿದೆ. ಭ್ರಷ್ಟಾಚಾರ, ಜಾತಿವಾದ, ಅಪರಾಧಗಳ ವಿರುದ್ಧ ಹೋರಾಡಲು ಪಕ್ಷ ರಚಿಸಿ, ಅದರ ನೆರಳಿನಲ್ಲಿ ಆಪ್ ಕಾರ್ಯ ನಿರ್ವಹಿಸುತ್ತಿದೆ ಎಂದು ಪಕ್ಷ ತೊರೆದವರೆಲ್ಲ ಮಂಗಳಾರುತಿ ಮಾಡಿದ್ದಾರೆ. ಕೇಜ್ರಿವಾಲ್ ಆಪ್ತ ವಲಯವೆಲ್ಲ ಹೀಗೆ ಆರೋಪ ಮಾಡಿ ಬೇಸರದಿಂದ ಕೇಜ್ರಿವಾಲ್ ಸಹವಾಸ ಬಿಟ್ಟಿದ್ದು..ಬೇರೇನೂ ಅಲ್ಲ ಕೇಜ್ರಿವಾಲ್ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಅಲ್ಲವೇ?