ರಾಮನಗರ: ರಾಜ್ಯದಲ್ಲಿ ಇನ್ನೂ ಉಪಚುನಾವಣೆ ಘೋಷಣೆಯಾಗಿಲ್ಲ. ಆದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ಚರ್ಚೆ ಬಲು ಜೋರಾಗಿದೆ. ಟಿಕೆಟ್ ಸಿಗದಿದ್ದರೂ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ಸಿ.ಪಿ. ಯೋಗೇಶ್ವರ್ ಈಗ ಯಾವ ಪಕ್ಷದ ಚಿಹ್ನೆ ಆದರೂ ಸ್ಪರ್ಧೆ ಮಾಡುವೆ ಎಂದಿದ್ದಾರೆ.
ಚನ್ನಪಟ್ಟಣ ಮೈತ್ರಿ ಅಭ್ಯರ್ಥಿಗಾಗಿ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಂದ ತೆರವಾದ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ದಳ ಮುಂದಾಗಿದೆ. ಬಿಜೆಪಿ ತನಗೆ ಈ ಕ್ಷೇತ್ರ ಬೇಕು ಎನ್ನುತ್ತಿದೆ. ಈ ಮಧ್ಯೆ ಸಿ.ಪಿ. ಯೋಗೇಶ್ವರ್ ಯಾರೇ ನಿಂತರೂ ನಾನು ಸ್ಪರ್ಧೆ ಮಾಡುವುದು ಖಚಿತ ಎಂದಿದ್ದರು. ಈಗ ಯಾವುದೇ ಪಕ್ಷದ ಚಿಹ್ನೆ ಆದರೂ ಸರಿ ಟಿಕೆಟ್ ಬೇಕು ಎನ್ನುತ್ತಿದ್ದಾರೆ.
ಈ ವಿಷಯವಾಗಿ ಮಾತನಾಡಿರುವ ಅವರು, ಎಲ್ಲವನ್ನೂ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದೇನೆ. ಪಕ್ಷದ ಮುಖಂಡರ ಆದೇಶದ ಮೇಲೆ ತೀರ್ಮಾನ ಮಾಡುತ್ತೇನೆ. ಸ್ಪರ್ಧೆ ಮಾಡಲೇಬೇಕು ಎಂದು ನಾನು ದಿಟ್ಟವಾಗಿ ಹೇಳುತ್ತಿದ್ದೆ. ಈಗಲೂ ಅದೇ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಎರಡೂ ಪಕ್ಷಗಳ ಮುಖಂಡರು ಕುಳಿತು ತೀರ್ಮಾನ ಹೇಳಲಿ. ಹೆಗಲಿಗೆ ಹೆಗಲು ಕೊಟ್ಟವರು ಚುನಾವಣೆಗೆ ಸ್ಪರ್ಧಿಸಿ ಅಂತಿದ್ದಾರೆ. ನಾನೂ ಕೂಡ ಚುನಾವಣೆಗಳಿಂದ ಬೇಸತ್ತಿದ್ದೇನೆ. ಎನ್ ಡಿಎ ಮೈತ್ರಿಕೂಟಕ್ಕೆ ನನ್ನಿಂದ ತೊಂದರೆ ಆಗಬಾರದು. ಮೈತ್ರಿ ಮುರಿದ ಎಂಬ ಅಪಕೀರ್ತಿ ಬರಬಾರದು ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.
ನನ್ನ ಕಾರ್ಯಕರ್ತರು ಸ್ಪರ್ಧೆಗೆ ಒತ್ತಡ ಹಾಕುತ್ತಿದ್ದಾರೆ. ಸ್ಪರ್ಧೆ ಮಾಡಬೇಕೆಂದು ನಾನು ನಿರ್ಧರಿಸಿದ್ದೇನೆ. ಚಿಹ್ನೆ ಯಾವುದಾದರೂ ಇರಲಿ, ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.