ಬೆಂಗಳೂರು: ಕನ್ನಡದ ಕನಸುಗಾರ ರವಿಚಂದ್ರನ್ ಇಂದಿಗೂ ಚಂದನವನದ ಕಸ್ತೂರಿ. ಒಂದು ಕಾಲದಲ್ಲಿ ಅವರು ಸಿನಿಮಾಗಳಿಗೆ ಮಾಡಿದಷ್ಟು ಖರ್ಚು ಬಹುಶಃ ಚಿತ್ರರಂಗದಲ್ಲಿ ಯಾರೂ ಮಾಡಿಲ್ಲ. ಆ ಕಾಲದಲ್ಲಿ ರವಿಚಂದ್ರನ್ ಸಿನಿಮಾಗಳಿಗೆ ಕೋಟಿ ಕೋಟಿ ಸುರಿದವರು. ಅವರು ಎಂದಿಗೂ ಹಣದ ಹಿಂದೆ ಹೋದವರಲ್ಲ ಎಂದು ಇಂದಿಗೂ ಅಭಿಮಾನಿಗಳು ಹಾಗೂ ಚಿತ್ರರಂಗ ಮಾತನಾಡಿಕೊಳ್ಳುತ್ತಿದೆ. ಈ ಮಧ್ಯೆ ಕ್ರೇಜಿಸ್ಟಾರ್ ತಮ್ಮ ಅಭಿಮಾನಿಗಳ ಕುತೂಹಲದ ಸುದ್ದಿಯೊಂದನ್ನು ವೈರಲ್ ಮಾಡಿದ್ದಾರೆ.
ಹಿಂದೆ ರವಿಚಂದ್ರನ್ ಸಿನಿಮಾದ ಒಂದು ಹಾಡು ಅಂದ್ರೆ, ಒಂದು ಸಿನಿಮಾ ರೇಂಜ್ ಎನ್ನುವಷ್ಟರ ಮಟ್ಟಿಗೆ ಖರ್ಚಾಗುತ್ತಿತ್ತು. ಅವರು ಸಿನಿಮಾದಿಂದ ಸಾಕಷ್ಟು ದುಡಿದು, ಅಷ್ಟೇ ಕಳೆದುಕೊಂಡಿದ್ದಾರೆ. ಹಲವು ಬಾರಿ ಗೆದ್ದಿದ್ದಾರೆ. ಹಲವು ಬಾರಿ ಸೋತಿದ್ದಾರೆ. ಆದರೂ ಅವರು ಮಾತ್ರ ಹಿಗ್ಗದೆ, ಕುಗ್ಗದೆ ಮಾತನಾಡಿಲ್ಲ. ಈಗ ವಿಷಯ ಏನಪ್ಪ ಅಂದ್ರೆ, ಹೀಗೆ ಸಿನಿಮಾಗಳಿಗೆ ಸಾಕಷ್ಟು ಖರ್ಚು ಮಾಡುತ್ತಿದ್ದ ರವಿಚಂದ್ರನ್, ಮೊದಲು ಪಡೆದ ಸಂಭಾವನೆ ಎಷ್ಟು ಎಂಬುವುದು? ಈ ಕುರಿತು ರವಿಚಂದ್ರನ್ ಸ್ವತಃ ಮಾತನಾಡಿದ್ದಾರೆ. ಖಾಸಗಿ ಚಾನೆಲ್ ವೊಂದರ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ರವಿಚಂದ್ರನ್ ಬಾಲ ನಟನಾಗಿ ಸಿನಿಮಾ ರಂಗ ಪ್ರವೇಶಿಸಿದವರು. ಆದರೆ, ನಾಯಕ ನಟನಾಗುವುದಕ್ಕೂ ಮುನ್ನ ಮನೆ ಬಳಿಯೇ ಇದ್ದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅಲ್ಲಿ ತಿಂಗಳಿಗೆ 30 ರೂಪಾಯಿ ಸಂಭಾವನೆಯನ್ನು ಕೊಡುತ್ತಿದ್ದರು ಎಂದು ಹೇಳಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೂ ಮುನ್ನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಗೆ ಹೋಗಿ ಹಾಜರಿ ಹಾಕಿ, ಪೂಜೆ ಮಾಡುವ ಕೆಲಸಕ್ಕೆ ಇಟ್ಟುಕೊಂಡಿದ್ದರು ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿ, ತಮ್ಮ ಮೊದಲ ಸಂಬಳದ ಬಗ್ಗೆ ಮಾತನಾಡಿದ್ದಾರೆ.
ನಂತರ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಅವರ ಮೊದಲ ಸಿನಿಮಾಗೆ ಸಂಬಳವೇ ಸಿಕ್ಕಿರಲಿಲ್ಲವಂತೆ. ಸಿನಿಮಾ ಅಂತ ಬಂದರೆ, ಮೊದಲ ಸಿನಿಮಾ ನಾನೇ ಮಾಡಿದ್ದರಿಂದ ಸಂಭಾವನೆ ಏನು ಕೊಟ್ಟಿರಲಿಲ್ಲ. ಆದರೆ, ಒಂದು ಸಿನಿಮಾದವರು 27 ಸಾವಿರ ರೂಪಾಯಿ ಸಂಭಾವನೆ ನೀಡಿದ್ದರು. ಆ ಸಿನಿಮಾಗಾಗಿ ಒಂದೂವರೆ ಲಕ್ಷ ರೂಪಾಯಿಯ ಕಾಸ್ಟ್ಯೂಮ್ ನ್ನು ನಾನೇ ತರಿಸಿಕೊಂಡಿದ್ದೆ. ಆ ವೇಳೆ ಅಮಿತಾಭ್ ಬಚ್ಚನ್‌ಗೂ ನನಗೂ ಒಬ್ಬನೇ ಕಾಸ್ಟ್ಯೂಮರ್ ಎಂದು ಕ್ರೇಜಿಸ್ಟಾರ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಕೂಡ ಥ್ರಿಲ್ ಆಗುತ್ತಿದ್ದಾರೆ. ಪಡೆದ ಸಂಭಾವನೆಗಿಂತ ಐದಾರು ಪಟ್ಟು ಹೆಚ್ಚು ಕಾಸ್ಟ್ಯೂಮ್ ಗೆ ಖರ್ಚು ಮಾಡಿದ ಕ್ರೇಜಿಸ್ಟಾರ್ ಬಗ್ಗೆ ಅಭಿಮಾನಿಗಳು ಕ್ರೇಜಿ ಯಾವಾಗಲೂ ಕ್ರೇಜಿ ಅಂತಾ ಹೇಳುತ್ತಿದ್ದಾರೆ.