ಬೆಂಗಳೂರು: ಸಾರ್ವಜನಿಕ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ಒ) ಸಂಸ್ಥೆಯು ಶೀಘ್ರದಲ್ಲೇ ಎಟಿಎಂಗಳ ಮೂಲಕ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡುವ ವ್ಯವಸ್ಥೆ ಜಾರಿಗೆ ತರಲಿದೆ. ಈಗ ಆನ್ ಲೈನ್ ಮೂಲಕ ಪಿಎಫ್ ಮೊತ್ತವನ್ನು ಕ್ಲೇಮ್ ಮಾಡಬಹುದಾಗಿದೆ. ಆದರೆ, ಹೆಚ್ಚಿನ ಜನರ ಕ್ಲೇಮ್ ಅರ್ಜಿಗಳನ್ನು ಇಪಿಎಫ್ಒ ತಿರಸ್ಕರಿಸುತ್ತದೆ. ಹಾಗೊಂದು ವೇಳೆ, ಕ್ಲೇಮ್ ಅರ್ಜಿ ತಿರಸ್ಕೃತಗೊಂಡರೆ ಏನು ಮಾಡಬೇಕು? ಹೇಗೆ ಮತ್ತೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
ಅರ್ಜಿ ಯಾವಾಗ ರಿಜೆಕ್ಟ್ ಆಗುತ್ತದೆ?
- ಕ್ಲೇಮ್ ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಅಕೌಂಟ್ ನಂಬರ್ ಸೇರಿ ಯಾವುದೇ ವೈಯಕ್ತಿಕ ವಿವರ ತಪ್ಪಾಗಿ ನೀಡುವುದು
- ಯೂನಿವರ್ಸಲ್ ಅಕೌಂಟ್ ನಂಬರ್ ಸಕ್ರಿಯವಾಗಿ ಇಲ್ಲದಿರುವುದು
- ಪಿಎಫ್ ಖಾತೆಯಲ್ಲಿ ಕಡಿಮೆ ಹಣವಿದ್ದು, ಹೆಚ್ಚಿನ ಮೊತ್ತಕ್ಕೆ ಕ್ಲೇಮ್ ಸಲ್ಲಿಸುವುದು
- ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಲು ಸರಿಯಾದ ಕಾರಣ ನೀಡದಿರುವುದು
- ನಿಮ್ಮ ಕ್ಲೇಮ್ ಅನ್ನು ಕೆಲಸ ಮಾಡುವ ಕಂಪನಿಯು ವೇರಿಫೈ ಮಾಡದಿರುವುದು
ರಿಜೆಕ್ಟ್ ಆದರೆ ಏನು ಮಾಡಬೇಕು?
ಇಪಿಎಫ್ಒ ವೆಬ್ ಸೈಟ್ ಗೆ ಹೋಗಿ, ಟ್ರ್ಯಾಕ್ ಕ್ಲೇಮ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ರಿಜೆಕ್ಟ್ ಆಗಲು ನಿಖರ ಕಾರಣ ಏನು ಎಂಬುದನ್ನು ತಿಳಿಸಲಾಗಿರುತ್ತದೆ. ಆ ಕಾರಣವನ್ನು ತಿಳಿದುಕೊಂಡು ಮತ್ತೆ ಇಪಿಎಫ್ಒ ಸೇವಾ ಪೋರ್ಟಲ್ ಗೆ ಭೇಟಿ ನೀಡಬೇಕು.
ವೆಬ್ ಪೋರ್ಟಲ್ ಗೆ ಭೇಟಿ ನೀಡಿ ಸರಿಯಾದ ಮಾಹಿತಿಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಹಿಂದಿನ ಅರ್ಜಿಯಲ್ಲಿ ಯಾವ ತಪ್ಪು ಆಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯಾದ ಬಳಿಕ ಮತ್ತೆ ಅದನ್ನು ಟ್ರ್ಯಾಕ್ ಮಾಡುತ್ತ ಇರಬೇಕು.



















