ಬೆಂಗಳೂರು: ನಮ್ಮ ಕುಟುಂಬಸ್ಥರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ವಿಮೆ ಮಾಡಿಸುತ್ತೇವೆ. ಅನಿರೀಕ್ಷಿತ ತುರ್ತು ಸಂದರ್ಭ ಎದುರಾದರೆ ಎಂದು ಟರ್ಮ್ ಇನ್ಶೂರೆನ್ಸ್ ಮಾಡಿಸುತ್ತೇವೆ. ಹೀಗೆ ಹಲವು ವಿಮೆಗಳನ್ನು ಮಾಡಿಸುವಾಗ ಹತ್ತಾರು ಅಂಶಗಳನ್ನು ತಿಳಿದುಕೊಳ್ಳುವುದು ಪ್ರಮುಖ ಸಂಗತಿಯಾಗಿರುತ್ತದೆ. ಹಾಗಾದರೆ ಯಾವುದೇ ವಿಮೆ ಮಾಡಿಸುವಾಗ ಯಾವ ಅಂಶಗಳನ್ನು ಗಮನದಲ್ಲಿಇಟ್ಟುಕೊಳ್ಳಬೇಕು? ಕ್ಲೇಮ್ ಸುಲಭವಾಗಿ ಮಾಡಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಆರೋಗ್ಯ ವಿಮೆ ಸೇರಿ ಯಾವುದೇ ವಿಮೆಗಳನ್ನು ಮಾಡಿಸುವಾಗ ನಿಯಮಗಳನ್ನು ಸಂಪೂರ್ಣವಾಗಿ ಓದಬೇಕು. ಅಲ್ಲದೆ, ವಿಮಾ ಕಂಪನಿಯ ಕ್ಲೇಮ್ ರೇಶಿಯೋ ಎಷ್ಟಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಕ್ಲೇಮ್ ನೀಡುವ ಸರಾಸರಿ ಶೇ.90ಕ್ಕಿಂತ ಹೆಚ್ಚಿದ್ದರೆ ಮಾತ್ರ ಆ ಕಂಪನಿಯಲ್ಲಿ ವಿಮೆ ಖರೀದಿ ಮಾಡಬೇಕು. ಕ್ಯಾಶ್ ಲೆಸ್ ಟ್ರೀಟ್ ಮೆಂಟ್, ವಿಮೆ ಪ್ರೀಮಿಯಂ, ಯಾವ ಕಾಯಿಲೆಗೆ ಚಿಕಿತ್ಸೆ ಇದೆ, ಯಾವುದಕ್ಕೆ ಇಲ್ಲ ಎಂಬುದನ್ನು ಗಮನಿಸಬೇಕು. ಟರ್ಮ್ ಇನ್ಶೂರೆನ್ಸ್ ಮಾಡಿಸುವವರು ಕಡ್ಡಾಯವಾಗಿ ತಮಗೆ ಇರುವ ಧೂಮಪಾನ, ಮದ್ಯಪಾನದ ಅಭ್ಯಾಸಗಳನ್ನು ಕಡ್ಡಾಯವಾಗಿ ನಮೂದಿಸಬೇಕು.
ಸುಲಭವಾಗಿ ಕ್ಲೇಮ್ ಮಾಡಿಕೊಳ್ಳಲು ಏನು ಮಾಡಬೇಕು?
• ಲೈಫ್ ಇನ್ಶೂರೆನ್ಸ್ ಅದರಲ್ಲೂ ಟರ್ಮ್ ಇನ್ಶೂರೆನ್ಸ್ ಪಡೆಯುವಾಗ ಅರ್ಜಿಯಲ್ಲಿ ನಿಮಗೆ ಈಗಾಗಲೇ ಏನಾದರೂ ಅನಾರೋಗ್ಯದ ಸಮಸ್ಯೆಗಳಿದ್ದರೆ ಅದರಲ್ಲಿ ಸೂಚಿಸುವಂತೆ ತಿಳಿಸಲಾಗಿರುತ್ತದೆ. ಅದನ್ನು ಹೇಳದೆ ಗೌಪ್ಯವಾಗಿಟ್ಟರೆ ಇನ್ಶೂರೆನ್ಸ್ ಕ್ಲೇಮ್ ರಿಜೆಕ್ಟ್ ಆಗುತ್ತದೆ.
• ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಕಟ್ಟಬೇಕು. ಸಮಯಕ್ಕೆ ಸರಿಯಾಗಿ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಸಿದರೆ ಮಾತ್ರ ಕ್ಲೇಮ್ ಸಿಗುತ್ತದೆ. ಇಲ್ಲದಿದ್ದರೆ ಕ್ಲೇಮ್ ಸಿಗಲ್ಲ. ಪ್ರೀಮಿಯಂ ಪಾವತಿ ವಿಳಂಬ ಮಾಡಿದರೆ ಅಥವಾ ಕಟ್ಟದಿದ್ದರೆ ಕ್ಲೇಮ್ ಸಿಗುವುದಿಲ್ಲ.
• ನಾಮಿನಿ ಮಾಹಿತಿ ನೀಡಬೇಕು. ಇನ್ಶೂರೆನ್ಸ್ ಮಾಡಿಸುವಾಗ ನಾಮಿನಿಯ ಹೆಸರು, ವಯಸ್ಸು ಮುಂತಾದ ವಿವರಗಳನ್ನು ಸರಿಯಾಗಿ ನಮೂದಿಸಿ. ಇದರಿಂದ ಸಂಕಷ್ಟದ ಸಂದರ್ಭಗಳಲ್ಲಿ ಕ್ಲೇಮ್ ಪ್ರಕ್ರಿಯೆ ಸರಳವಾಗುತ್ತದೆ.
ವಿಮೆ ಮಾಡಿಸಿದ ವ್ಯಕ್ತಿ ಸಾವಿಗೀಡಾದರೆ?
ಇನ್ಶೂರೆನ್ಸ್ ಪಡೆದಿರುವ ವ್ಯಕ್ತಿ ಮೃತಪಟ್ಟ ನಂತರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡಬೇಕು. ಸಾಮಾನ್ಯವಾಗಿ ಇನ್ಶೂರೆನ್ಸ್ ಕಂಪನಿಗಳು ವ್ಯಕ್ತಿ ಮೃತಪಟ್ಟ 30 ದಿನದ ಒಳಗಾಗಿ ಕ್ಲೇಮ್ ಪ್ರಕ್ರಿಯೆ ಜಾರಿಗೊಳಿಸುವಂತೆ ಸೂಚಿಸುತ್ತವೆ. ಆದರೆ, ಒಂದು ಕಂಪನಿಯಿಂದ ಮತ್ತೊಂದಕ್ಕೆ ಈ ದಿನಗಳ ಮಿತಿ ಬದಲಾಗುತ್ತದೆ ಎಂಬ ಸಂಗತಿ ನೆನಪಿರಲಿ.
ಇನ್ಶೂರೆನ್ಸ್ ಕಂಪನಿಗೆ ವಿಮೆ ಹೊಂದಿರುವ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಗ್ರಾಹಕ ಸೇವಾ ಕೇಂದ್ರದ ಮೂಲಕ, ವಿಮಾ ಕಚೇರಿಗೆ ಭೇಟಿ ನೀಡುವ ಮೂಲಕ ಅಥವಾ ಇ- ಮೇಲ್ ಮುಖಾಂತರ ಮಾಹಿತಿ ನೀಡಬಹುದು. ಏಜೆಂಟರ ಮೂಲಕ ಇನ್ಶೂರೆನ್ಸ್ ಪಡೆದಿದ್ದರೆ ಅವರ ಮೂಲಕವೂ ಈ ಮಾಹಿತಿ ಕೊಡಬಹುದು.
ಯಾವ ದಾಖಲೆ ಸಲ್ಲಿಸಬೇಕು?
ಸಾಮಾನ್ಯವಾಗಿ ಇನ್ಶೂರೆನ್ಸ್ ಕ್ಲೇಮ್ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಎನ್ನುವ ಮಾಹಿತಿ ನಿರ್ದಿಷ್ಟ ಇನ್ಶೂರೆನ್ಸ್ ಕಂಪನಿಗಳ ವೆಬ್ಸೈಟ್ನಲ್ಲಿ ಇರುತ್ತದೆ. ಸಾಮಾನ್ಯವಾಗಿ ವಿಮಾ ಪಾಲಿಸಿಯ ನೈಜ ದಾಖಲೆ, ಮರಣ ಪ್ರಮಾಣ ಪತ್ರ, ಡೆತ್ ಕ್ಲೇಮ್ ಅರ್ಜಿ, ಕ್ಯಾನ್ಸಲ್ಡ್ ಚೆಕ್, ನಾಮಿನಿಯ ಕೆವೈಸಿ ದಾಖಲೆಗಳ ಜತೆಗೆ ನಾಮಿನಿಯ ಆಧಾರ್, ಪಾನ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ ಅಥವಾ ಇನ್ಯಾವುದೇ ಸರ್ಕಾರಿ ಗುರುತಿನ ಚೀಟಿ ನೀಡಬಹುದು.
ಕ್ಲೇಮ್ ನಿಯಮಗಳೂ ಗೊತ್ತಿರಲಿ
ಸರಿಯಾಗಿ ಸಲ್ಲಿಕೆಯಾಗಿರುವ ಕ್ಲೇಮ್ ಅರ್ಜಿಗಳನ್ನು 30 ದಿನದ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ನಿಯಮ ಹೇಳುತ್ತದೆ. ಕೆಲ ಪ್ರಕರಣಗಳನ್ನು ಕ್ಲೇಮ್ ಪರಿಶೀಲಿಸಲು ಹೆಚ್ಚಿನ ಸಮಯ ಅಗತ್ಯವಿದೆ ಎನಿಸಿದರೆ ಇನ್ಶೂರೆನ್ಸ್ ಕಂಪನಿ 120 ದಿನಗಳ ಹೆಚ್ಚುವರಿ ಸಮಯ ಪಡೆದುಕೊಳ್ಳಬಹುದು. ಅಂತಿಮವಾಗಿ ಕ್ಲೇಮ್ ಅನ್ನು ಇನ್ಶೂರೆನ್ಸ್ ಕಂಪನಿ ಒಪ್ಪಿಕೊಂಡ ಮೇಲೆ ಕ್ಲೇಮ್ ನ ಮೊತ್ತ ನಾಮಿನಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ.