ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು ಬುಧವಾರ ಭಾರೀ ದುರಂತವೊಂದಕ್ಕೆ ಸಾಕ್ಷಿಯಾಗಿದೆ. 6 ವಾರಗಳ ಮಹಾಕುಂಭ ಮೇಳದ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾದ ಮೌನಿ ಅಮಾವಾಸ್ಯೆಯ ಮುಂಜಾನೆಯೇ ಕಾಲ್ತುಳಿತ ಉಂಟಾಗಿ ಹಲವು ಮಂದಿ ಸಾವಿಗೀಡಾಗಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ:

ತಡರಾತ್ರಿ 1 ಗಂಟೆಗೆ ನಡೆಯಿತು ಘೋರ ದುರಂತ
ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಗಂಗಾ, ಯಮುನಾ, ಸರಸ್ವತಿಯ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲೆಂದು ದೇಶದ ಮೂಲೆ ಮೂಲೆಗಳಿಂದಲೂ ಸಾಗರದಂತೆ ಜನ ಪ್ರಯಾಗ್ ರಾಜ್ ಗೆ ಹರಿದುಬಂದಿದ್ದರು. ಸಂಗಮ ಹಾಗೂ ಘಾಟ್‌ನ ಸುಮಾರು 12 ಕಿ.ಮೀ. ತೀರದುದ್ದಕ್ಕೂ ಕೋಟ್ಯಂತರ ಮಂದಿ ನೆರೆದಿದ್ದರು. ಜನದಟ್ಟಣೆ ಹೇಗಿತ್ತೆಂದರೆ ಪರಸ್ಪರರನ್ನು ತಳ್ಳಿಕೊಂಡೇ ಮುಂದೆ ಸಾಗುವಂಥ ಸ್ಥಿತಿ ನಿರ್ಮಾಣವಾಗಿತ್ತು. ತಡರಾತ್ರಿಯಾದರೂ ಭಕ್ತಾದಿಗಳು ಹರಿದುಬರುತ್ತಲೇ ಇದ್ದು, ರಾತ್ರಿ 1ರಿಂದ 2 ಗಂಟೆಯ ವೇಳೆಗೆ ಘೋರ ದುರಂತವೊಂದು ಸಂಭವಿಸಿತು.

ಆಗಿದ್ದೇನು?
ಮಂಗಳವಾರ ತಡರಾತ್ರಿ ಸುಮಾರು 1 – 2 ಗಂಟೆಯಾಗಿರಬಹುದು. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪಾಪಗಳನ್ನು ತೊಳೆಯುವ ಏಕೈಕ ಉದ್ದೇಶದಿಂದ ಕೋಟಿಗಟ್ಟಲೆ ಭಕ್ತರು ಬಂದಿದ್ದ ಕಾರಣ, ಎಲ್ಲರೂ ಬಂದ ಹಾಗೆಯೇ ತ್ರಿವೇಣಿ ಸಂಗಮದತ್ತ ಮುನ್ನುಗ್ಗತೊಡಗಿದರು. ಏಕಾಏಕಿ ಜನದಟ್ಟಣೆಯ ಮಧ್ಯೆ ನೂಕಾಟ, ತಳ್ಳಾಟ ಆರಂಭವಾಯಿತು. ಈ ಒತ್ತಡದಿಂದಾಗಿ ಅಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಏಕಾಏಕಿ ಮುರಿದುಬಿತ್ತು. ಪರಿಣಾಮ ಒಬ್ಬರ ಮೇಲೊಬ್ಬರು ಬೀಳತೊಡಗಿದರು, ಎಲ್ಲೆಡೆ ಗಾಬರಿ, ಗೊಂದಲ ಉಂಟಾಗಿ ಜನರು ಭಯಭೀತರಾಗಿ ಓಡಲು ಆರಂಭಿಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿತು. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುವ ಭರದಲ್ಲಿ ಅನೇಕರು ಕಾಲ್ತುಳಿತಕ್ಕೆ ಸಿಲುಕಿ, ಅಸುನೀಗಿದರು. 30ಕ್ಕೂ ಅಧಿಕ ಮಂದಿ ಗಾಯಗೊಂಡರು.

ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
“ನಾವು ಜನದಟ್ಟಣೆಯ ಮಧ್ಯೆಯೇ ಮುಂದೆ ಸಾಗುತ್ತಿದ್ದೆವು. ಏಕಾಏಕಿ ಜನರು ತಳ್ಳಲು ಶುರು ಮಾಡಿದರು. ನಾವು ಒಳಗೆ ಟ್ರ್ಯಾಪ್ ಆದೆವು, ನಮ್ಮಲ್ಲಿ ಅನೇಕರು ಕೆಳಗೆ ಬಿದ್ದೆವು. ಜನರು ನೂಕಾಟ ಹೇಗಿತ್ತೆಂದರೆ ಯಾರನ್ನೂ ಯಾರೂ ನಿಯಂತ್ರಿಸುವ ಪರಿಸ್ಥಿತಿಯಲ್ಲೇ ಇರಲಿಲ್ಲ” ಎಂದು ಪ್ರತ್ಯಕ್ಷದರ್ಶಿ ಭಕ್ತರೊಬ್ಬರು ಹೇಳಿದ್ದಾರೆ.
ಗಾಯಗೊಂಡ ತಮ್ಮ ಮಗುವನ್ನು ಮಡಿಲ ಮೇಲೆ ಮಲಗಿಸಿಕೊಂಡಿದ್ದ ಮಹಿಳೆಯೊಬ್ಬರು “ನನಗೆ ಏನು ಮಾಡಬೇಕು, ಎಲ್ಲಿ ಹೋಗಬೇಕೆಂದೇ ತೋಚುತ್ತಿಲ್ಲ” ಎಂದು ಅಳುತ್ತಿದ್ದುದು ಎಲ್ಲರ ಮನಸ್ಸು ಕರಗಿಸುವಂತಿತ್ತು. ಕಾಲ್ತುಳಿತ ಘಟನೆ ನಡೆಯುತ್ತಿರುವಾಗಲೂ, ನಂತರವೂ ಅನೇಕರು ಪುಣ್ಯಸ್ನಾನ ಮಾಡುತ್ತಿದ್ದರು ಎಂದೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ನಿರಂತರ ಫೋನ್ ಕರೆ
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರ ಪಡೆದಿದ್ದಾರೆ. ನಿರಂತರವಾಗಿ ಮೋದಿಯವರು ನನ್ನ ಸಂಪರ್ಕದಲ್ಲಿದ್ದು, ತತ್ ಕ್ಷಣವೇ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಸೂಚಿಸಿದ್ದಾರೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೂ ಆದಿತ್ಯನಾಥ್ ಗೆ ಕರೆ ಮಾಡಿ, ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಕೂಡಲೇ ಅಲ್ಲಿಂದ ತೆರಳಿ: ಸೂಚನೆ
ಘಟನೆ ನಡೆದ ಕೂಡಲೇ ಭಾರೀ ಸಂಖ್ಯೆಯ ಆಂಬುಲೆನ್ಸ್ ಗಳು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಕುಂಭದ ಸೆಕ್ಟರ್ 2ರಲ್ಲಿ ನಿರ್ಮಿಸಲಾದ ತಾತ್ಕಾಲಿಕ ಆಸ್ಪತ್ರೆಗೆ ದಾಖಲಿಸಿವೆ. ಸಂಗಮದಲ್ಲಿ ಮಿಂದೆದ್ದ ಕೂಡಲೇ ಅಲ್ಲಿಂದ ತೆರಳುವಂತೆ ಭಕ್ತಾದಿಗಳಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಫೆಬ್ರವರಿ 26ರವರೆಗೆ ನಡೆಯಲಿದೆ ಮಹಾಕುಂಭ
ಜಗತ್ತಿನ ಅತಿದೊಡ್ಡ ಧಾರ್ಮಿಕ ಸಮ್ಮೇಳನ ಎಂದೇ ಕರೆಸಿಕೊಳ್ಳುವ ಮಹಾ ಕುಂಭವು 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಬಾರಿ 4 ಗ್ರಹಗಳು ಒಂದೇ ಸಾಲಿಗೆ ಬಂದಿರುವ ಕಾರಣ, ಈ ಬಾರಿಯ ಕುಂಭಮೇಳವನ್ನು 144 ವರ್ಷಗಳಿಗೊಮ್ಮೆ ನಡೆಯುವ ಅಪರೂಪದ ಮಹಾಕುಂಭಮೇಳ ಎಂದು ಕರೆಯಲಾಗುತ್ತದೆ. ಜನವರಿ 13ರಂದು ಆರಂಭವಾಗಿರುವ ಕುಂಭಮೇಳವು ಫೆಬ್ರವರಿ 26ರವರೆಗೆ ನಡೆಯಲಿದೆ.

ಅಮೃತ ಸ್ನಾನ ಮುಂದುವರಿಯಲಿದೆ
ಇಂದು ನಡೆಯಬೇಕಿದ್ದ ಅಮೃತ ಸ್ನಾನವನ್ನು ಕಾಲ್ತುಳಿತದ ಹಿನ್ನೆಲೆಯಲ್ಲಿ ರದ್ದು ಮಾಡುತ್ತಿರುವುದಾಗಿ ಮುಂಜಾನೆ ಅಖಾಡಗಳು ಘೋಷಿಸಿದ್ದವು. ಆದರೆ, ನಂತರದಲ್ಲಿ ಜನದಟ್ಟಣೆ ಸ್ವಲ್ಪಮಟ್ಟಿಗೆ ತಗ್ಗಿದ ಕಾರಣ, ಅಮೃತ ಸ್ನಾನವು ಈ ಹಿಂದೆ ನಿಗದಿಪಡಿಸಿದಂತೆ ನಡೆಯಲಿದೆ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ರವೀಂದ್ರ ಪುರಿ ಘೋಷಿಸಿದ್ದಾರೆ. ರಾತ್ರಿಯಿಂದೀಚೆಗೆ ಕೋಟ್ಯಂತರ ಜನರು ಆಗಮಿಸುತ್ತಿದ್ದ ಕಾರಣ ಹಾಗೂ ದುರಂತ ನಡೆದ ಕಾರಣ ನಾವು ಪುಣ್ಯಸ್ನಾನವನ್ನು ಮುಂದೂಡಲು ನಿರ್ಧರಿಸಿದ್ದೆವು. ಆದರೆ, ಈಗ ದಟ್ಟಣೆ ಕಡಿಮೆಯಾಗಿದೆ. ಹೀಗಾಗಿ, ನಾನು ಪುಣ್ಯ ಸ್ನಾನ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಎಲ್ಲ ಅಖಾಡಗಳ ಮೆರವಣಿಗೆಯೂ ಅಂದುಕೊಂಡಂತೆಯೇ ನಡೆಯಲಿದೆ ಎಂದು ರವೀಂದ್ರ ಪುರಿ ತಿಳಿಸಿದ್ದಾರೆ.
ಸಂಗಮಕ್ಕೆ ಹೋಗಬೇಡಿ, ಬೇರೆಗೆ ಸ್ನಾನಗೈಯ್ಯಿರಿ
ಕಾಲ್ತುಳಿತದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ದಯವಿಟ್ಟು ಸಂಗಮ ಸ್ಥಳಕ್ಕೇ ಹೋಗಿ ಪುಣ್ಯಸ್ನಾನ ಮಾಡಬೇಕು ಎಂಬ ಧಾವಂತ ಬೇಡ. ನಿಮಗೆ ಸಮೀಪವಿರುವ ಗಂಗೆಯ ಘಾಟ್ ಗಳಲ್ಲಿ ಪವಿತ್ರ ಸ್ನಾನ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜತೆಗೆ, ಆಡಳಿತ ಹಾಗೂ ಅಧಿಕಾರಿಗಳ ಸೂಚನೆ, ನಿರ್ದೇಶನಗಳನ್ನು ಪಾಲಿಸುವಂತೆ, ವದಂತಿಗಳಿಗೆ ಕಿವಿಗೊಡದಂತೆಯೂ ಸೂಚಿಸಿದ್ದಾರೆ.

ಮೌನಿ ಅಮಾವಾಸ್ಯೆಯ ಮಹತ್ವವೇನು?
ಮಹಾಕುಂಭ ಮೇಳ ನಡೆಯುವ 6 ವಾರಗಳಲ್ಲಿ ಮೌನಿ ಅಮಾವಾಸ್ಯೆಯ ದಿನವನ್ನು ಹಿಂದೂಗಳು ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತಾರೆ. ಅಲ್ಲದೇ, ಗಂಗಾ, ಯಮುನಾ, ಸರಸ್ವತಿ ನದಿಯ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಈ ದಿನ ಮಿಂದೆದ್ದರೆ ಎಲ್ಲ ಪಾಪಗಳಿಂದ ಮುಕ್ತರಾಗಿ, ಶಾಂತಿ ಹಾಗೂ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಭಕ್ತಾದಿಗಳು ಈ ದಿನ ಮೌನಾಚರಣೆ, ಉಪವಾಸ ಕೈಗೊಂಡು, ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡುತ್ತಾರೆ. ಈ ಬಾರಿ 4 ಗ್ರಹಗಳು ಸರಳ ರೇಖೆಗೆ ಬರುವ ಅಪರೂಪದ ಖಗೋಳ ವಿದ್ಯಮಾನ ಸಂಭವಿಸುತ್ತಿರುವ ಕಾರಣ, 144 ವರ್ಷಗಳಿಗೊಮ್ಮೆ ಉಂಟಾಗುವ ಈ ‘ತ್ರಿವೇಣಿ ಯೋಗ’ವೂ ಕೂಡ ಮೌನಿ ಅಮಾವಾಸ್ಯೆಯ ದಿನದ ಆಧ್ಯಾತ್ಮಿಕ ಮಹತ್ವವನ್ನು ವೃದ್ಧಿಸಿದೆ. ಅದರಂತೆ, ಇಂದು ಸುಮಾರು 10 ಕೋಟಿ ಭಕ್ತರು ಬುಧವಾರ ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ. ಈಗಾಗಲೇ 20 ಕೋಟಿಗೂ ಅಧಿಕ ಮಂದಿ ಸಂಗಮದಲ್ಲಿ ಮಿಂದೆದ್ದಿದ್ದು, ಫೆ.26ರೊಳಗೆ ಸುಮಾರು 40 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ.