ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಈಗಾಗಲೇ ವಿಪಕ್ಷಗಳು ಪಟ್ಟು ಹಿಡಿದಿವೆ. ಈ ಮಧ್ಯೆ ಸಚಿವರು ಗೌಪ್ತ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ, ಡಿಕೆಶಿ ಹಾಗೂ ಡಿಕೆ ಸುರೇಶ್ ಅವರ ಹೇಳಿಕೆಗಳು ಕೂಡ ಆಶ್ಚರ್ಯ ವ್ಯಕ್ತವಾಗುವಂತೆ ಮಾಡುತ್ತಿವೆ.
ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯ 5 ವರ್ಷ ಪೂರ್ಣಾವಧಿ ಸಿಎಂ ಆಗಿರುತ್ತಾರೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಿಎಂ ರೇಸ್ ನಲ್ಲಿ ಡಿಕೆಶಿ ಕೂಡ ಮುಂಚೂಣಿಯಲ್ಲಿದ್ದರು. ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕು ಎಂದು ಅವರ ಅಭಿಮಾನಿಗಳು, ಆಪ್ತರು ಪಟ್ಟು ಹಿಡಿದಿದ್ದರು. ಆದರೆ ಸಿದ್ದರಾಮಯ್ಯಗೆ ಹೈಕಮಾಂಡ್ ಸಿಎಂ ಪಟ್ಟ ನೀಡಿತು. ಹೀಗಾಗಿ ಡಿಕೆಶಿ ಡಿಸಿಎಂ ಆದರು.
ಈಗ ಮುಡಾ ಹಗರಣದಿಂದಾಗಿ ರಾಜ್ಯದಲ್ಲಿ ಮತ್ತೆ ಸಿಎಂ ಸ್ಥಾನದ ಬದಲಾವಣೆಯ ಕುರಿತು ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅಭಿಮಾನಿಗಳು ಹೆಚ್ಚುವರಿ ಡಿಸಿಎಂ ಬೇಡಿಕೆ ಇಡಲು ಆರಂಭಿಸಿದರು. ಆದರೆ, ಈಗ ಸಿಎಂ ಬದಲಾವಣೆಯ ಮುಂದೆ ಅದು ಗೌಣವಾಗಿದೆ.
ಯಾವುದೇ ಕಾರಣಕ್ಕೂ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹೀಗಿದ್ದರೂ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಸಿದ್ದರಾಮಯ್ಯ ಆಪ್ತ ಸಚಿವರು ಫುಲ್ ಆಕ್ಟೀವ್ ಆಗಿರುವುದು ಹಲವಾರು ಚರ್ಚೆಗೆ ಗ್ರಾಸವಾಗಿದೆ. ಸತೀಶ್ ಮುಂಚೂಣಿಯಲ್ಲೇ ಇದ್ದುಕೊಂಡು ಕೆಲವು ಸಚಿವರ ಜೊತೆಗೆ ಗೌಪ್ಯ ಸಭೆಯನ್ನು ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಮತ್ತು ಡಿಕೆ ಸುರೇಶ್ ಭಿನ್ನ ಹೇಳಿಕೆಗಳು ಅನುಮಾನಕ್ಕೆ ದಾರಿ ಮಾಡಿಕೊಟ್ಟಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇಲ್ಲವೇ ಇಲ್ಲ. ನಾನು ಬಹಳಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ . ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ಅವಧಿಯವರೆಗೂ ಮುಖ್ಯಮಂತ್ರಿಗಳಾಗಿ ಇರುತ್ತಾರೆ ಎಂದು ಡಿಕೆ ಸುರೇಶ್ ಇತ್ತೀಚೆಗೆ ಹೇಳಿದ್ದಾರೆ.
ಒಂದು ವೇಳೆ ಹೈಕಮಾಂಡ್ ಸಿದ್ದರಾಮಯ್ಯ ಅವರು ಬದಲಾಯಿಸಲು ಮುಂದಾದರೆ, ಅವರು ಸೂಚಿಸಿದ ವ್ಯಕ್ತಿಯೇ ಸಿಎಂ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತದೆ. ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡುವ ಬಗ್ಗೆ ಸಚಿವರಲ್ಲೇ ಭಿನ್ನಾಭಿಪ್ರಾಯಗಳು ಇವೆ. ಹೀಗಾಗಿ ಒಂದು ವೇಳೆ ಸಿಎಂ ಸ್ಥಾನ ಬದಲಾವಣೆಯಾದರೂ ಸಿಎಂ ಹಾಗೂ ಹೆಚ್ಚುವರಿ ಡಿಸಿಎಂ ಸ್ಥಾನವನ್ನೂ ಹೈಕಮಾಂಡ್ ಸೃಷ್ಟಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಹೀಗಾಗಿ ಡಿಕೆ ಬ್ರದರ್ಸ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.