ವಿಜಯಪುರ: ಭೀಮಾ ತೀರದಲ್ಲಿ ಹಂತಕರ ರಕ್ತ ಚರಿತ್ರೆ ಇತಿಹಾಸ ಮತ್ತೆ ಮುಂದುವರೆದಿದ್ದು, ಜಿಲ್ಲೆ ಬೆಚ್ಚಿ ಬಿದ್ದಿದೆ. ಫೆ. 11ರಂದು ಬಾಗಪ್ಪ ಹರಿಜನ (Bagappa Harijan) ಕೊಲೆ ನಡೆದಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಕೆಲವು ಸ್ಫೋಟಕ ವಿಚಾರಗಳು ಬಯಲಾಗಿವೆ.
ಬಾಗಪ್ಪನನ್ನು ಆರೋಪಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಡ ಮುಂಗೈ ಕಟ್ ಆಗಿ ಬಿದ್ದಿತ್ತು. ನಂತರ ಆತನ ಮೇಲೆ ಕಂಟ್ರಿ ಪಿಸ್ತೂಲ್ನಿಂದ ಗುಂಡು ಹಾರಿಸಿ ಆತನ ಕೊಲೆ ದೃಢ ಪಡಿಸಿಕೊಂಡು ಹೋಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕಾಶ ಅಲಿಯಾಸ್ ಪಿಂಟ್ಯಾ ಮೇಲಿನಕೇರಿ ಹಾಗೂ ಸಹಚರರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಾಶ ಅಲಿಯಾಸ್ ಪಿಂಟ್ಯಾ ಮೇಲಿನಕೇರಿ (26) ಹಾಗೂ ಸಹಚರಾದ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ರಾಹುಲ ಭೀಮಾಶಂಕರ ತಳಕೇರಿ (20) ಇಂಡಿ ತಾಲೂಕಿನ ಅಗರಖೇಡ್ ಗ್ರಾಮದ ಸುದೀಪ ಕಾಂಬಳೆ (20) ಹಾಗೂ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಬಸವೇಶ್ವರ ಕಾಲೋನಿಯ ಮಣಿಕಂಠ ಅಲಿಯಾಸ್ ಗದಿಗೆಪ್ಪ ಶಂಕ್ರಪ್ಪ ಬೆನಕೊಪ್ಪ (27) ಬಂಧಿತರು.
ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. “ವಕೀಲ ರವಿ ಮೇಲಿನಕೇರಿ ಕೊಲೆ ನಂತರ ನನಗೆ ಬಾಗಪ್ಪ ಕಿರುಕುಳ ನೀಡುತ್ತಿದ್ದ. ರವಿ ಗಳಿಸಿರುವ ಆಸ್ತಿ ನೀಡುವಂತೆ ಒತ್ತಾಯಿಸುತ್ತಿದ್ದ. ಇಲ್ಲವೇ 10 ಕೋಟಿ ರೂ. ಹಣ ನೀಡು, ಅದೂ ಆಗದಿದ್ದರೆ ರವಿ ಪತ್ನಿಯನ್ನು ಕಳುಹಿಸು ಅಂತ ಬಾಗಪ್ಪ ಹರಿಜನ ಕಿರುಕುಳ ನೀಡುತ್ತಿದ್ದ. ಹೀಗಾಗಿ ನಾವು ಆತನನ್ನು ಎತ್ತಿಬಿಟ್ಟೇವು” ಎಂದು ಪಿಂಟ್ಯಾ ಹೇಳಿದ್ದಾನೆ ಎಂಬುವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ರವಿ ಮೇಲಿನಕೇರಿ ಮೂಲತಃ ಇಂಡಿ ತಾಲೂಕಿನ ಅಗರಖೇಡ್ ಗ್ರಾಮದವರು. ರವಿ, ಬಾಗಪ್ಪನ ಪತ್ನಿಯ ಕಡೆಯ ಸಂಬಂಧಿಯೂ ಹೌದು. ಹಲವಾರು ವರ್ಷಗಳಿಂದ ಬಾಗಪ್ಪನ ಜೊತೆಗೆ ಗುರುತಿಸಿಕೊಂಡಿದ್ದರು. ಸಣ್ಣಪುಟ್ಟ ವ್ಯಾಜ್ಯಗಳಲ್ಲಿ ಜಗಳಗಳಲ್ಲಿ ಭಾಗಿಯಾಗಿ ಇಬ್ಬರೂ ಮಧ್ಯಸ್ಥಿಕೆ ವಹಿಸುತ್ತಿದ್ದರು. ಆನಂತರ ಲಾ ಓದಿ ವಕೀಲರಾಗಿ ವಿಜಯಪುರದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ- ಮಕ್ಕಳೊಂದಿಗೆ ಇದ್ದರು.
ಆದರೆ, ಆನಂತರ ರವಿ ಹಾಗೂ ಬಾಗಪ್ಪ ಮಧ್ಯೆ ಮನಸ್ತಾಪವಾಗಿತ್ತು. ಇಬ್ಬರೂ ಸೇರಿ ರಿಯಲ್ ಎಸ್ಟೇಟ್ ಮಾಡುತ್ತಿದ್ದಾಗ ತಕರಾರು ಬಂದಿದೆ. ಇದೇ ವೇಳೆ ರವಿ ಮೇಲಿನಕೇರಿ ನನ್ನ ಹೆಸರನ್ನು ಬಳಕೆ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾನೆ. ಜಮೀನು, ಮನೆ, ಸೈಟ್ಗಳನ್ನು ಮಾಡಿಕೊಂಡಿದ್ದಾನೆ ಎಂದು ಬಾಗಪ್ಪ ಹರಿಜನ ರವಿ ವಿರುದ್ಧ ಆರೋಪ ಮಾಡುತ್ತಿದ್ದ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ರೌಡಿ ಶೀಟರ್ ತುಳಸಿರಾಮ ಹರಿಜನ ಹಾಗೂ ರವಿ ಮೇಲಿನಕೇರಿ ಮಧ್ಯೆ ಜಗಳವಾಗಿತ್ತು. ಆಗ ರವಿ ಮೇಲಿನಕೇರಿ ಹಾಗೂ ಆತನ ಸಹೋದರರು, ಸಹಚರರು ಸೇರಿ ತುಳಸಿರಾಮ ಹರಿಜನನ್ನು ಹೊಡೆದಿದ್ದಾರೆ. ಆನಂತರ ತುಳಸಿರಾಮ ಹಾಗೂ ಬಾಗಪ್ಪ ಒಂದಾಗಿದ್ದಾರೆ. ಆಗ ಬಾಗಪ್ಪ ನಾನು ರವಿಗೆ ಬೆಂಬಲ ನೀಡುವುದಿಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿದ್ದಾನೆ. ಇದರಿಂದಾಗಿ ತುಳಸಿರಾಮ್ ತನ್ನ ಸಹಚರರ ಗ್ಯಾಂಗ್ ಕಟ್ಟಿಕೊಂಡು ಕೊಲೆಗೆ ಸಂಚು ರೂಪಿಸಿದ್ದಾನೆ.
2024 ರ ಅಗಷ್ಟ 8ರಂದು ರವಿ ಮೇಲಿನಕೇರಿ ನ್ಯಾಯಾಲಯದಿಂದ ಸ್ಕೂಟಿ ಮೇಲೆ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಇನ್ನೋವಾ ಕಾರಿನಲ್ಲಿ ಬಂದು ಗುದ್ದಿದ್ದಾರೆ. ಆಗ ರವಿ ಇನ್ನೋವಾ ಕಾರಿನ ಕೆಳಗೆ ಸಿಲುಕಿಕೊಂಡಿದ್ದಾನೆ. ಹಂತಕರು ಇನ್ನೋವಾದ ಕೆಳಗೆ ಸಿಕ್ಕ ರವಿಯನ್ನು ಹಾಗೆಯೇ ಎಳೆದುಕೊಂಡು ಬಸವ ನಗರ, ಆಯುರ್ವೇದ ಕಾಲೇಜು, ಮನಗೂಳಿ ಅಗಸಿ ಮೂಲಕ ಎಳೆದುಕೊಂಡು ಹೋಗಿ ಜಿಪಂ ಪ್ರವೇಶ ದ್ವಾರದ ಬಳಿ ಬಿಸಾಕಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತುಳಸಿರಾಮ ಹರಿಜನ ಸೇರಿದಂತೆ ಆರೋಪಿಗಳನ್ನು ಬಂಧಿಸಿದ್ದರು. ಈಗ ಆ ಕೊಲೆಯ ಸೇಡು ಎಂಬಂತೆ ಬಾಗಪ್ಪ ಕೊಲೆಯಾಗಿದ್ದಾನೆ ಎನ್ನಲಾಗಿದೆ.