ಮುಡಾ ಪ್ರಕರಣದಲ್ಲಿ ಸಿಎಂ ಪಾತ್ರ ಏನು? ಎಂದು ಯಾರೂ ಹೇಳುತ್ತಿಲ್ಲ. ಅವರ ಪಾತ್ರ ಏನು ಎಂದು ಹೇಳಿ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ದೂರುದಾರರ ಪರ ವಕೀಲರಿಗೆ ಕೇಳಿದ ಪ್ರಶ್ನೆ ಇದಾಗಿದೆ.
ನ್ಯಾಯಮೂರ್ತಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸಿಎಂ ವಿರುದ್ಧ ಆರೋಪಿಸುವುದಕ್ಕೆ ಏನೂ ಇಲ್ಲ ಎಂದಿದ್ದಾರೆ.
ಸ್ನೇಹಮಯಿ ಕೃಷ್ಣ ಪರವಾಗಿ ವಾದ ಮಂಡಿಸಿದ ವಕೀಲರಾದ ಮಣೀಂದರ್ ಸಿಂಗ್, ಮುಡಾ ಅಭಿವೃದ್ಧಿಪಡಿಸಿದ ಭೂಮಿಯನ್ನು ಕಂದಾಯ ಭೂಮಿ ಎಂಬುವುದಾಗಿ ತೋರಿಸಲಾಗಿದೆ. ತನಿಖೆ ನಡೆದು ಸತ್ಯಾಂಶ ಹೊರಬರಬೇಕು ಎನ್ನುವುದಷ್ಟೇ ನಮ್ಮ ಧ್ಯೇಯ. ಭೂಮಿ ಸ್ವಾಧೀನವಾಗಿ ಪರಿಹಾರದ ಹಣ ನೀಡಿದರೂ ಮಾಲೀಕರು ಪಡೆದಿಲ್ಲ. 2004ರಲ್ಲಿ ಕೃಷಿ ಜಮೀನು ಎಂದು ನಮೂದಿಸಿ ಸಿಎಂ ಸಂಬಂಧಿ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಅಬ್ರಹಾಂ ಪರ ವಕೀಲ ರಂಗನಾಥರೆಡ್ಡಿ, ಪೊಲೀಸರು ದೂರು ದಾಖಲಿಸಿಕೊಳ್ಳದಿದ್ದಕ್ಕೆ ರಾಜ್ಯಪಾಲರ ಅನುಮತಿ ಕೇಳಲಾಯಿತು. 1998ರ ಮೇ 18 ರಂದು ನಿಂಗ ಎಂಬುವರ ಪರವಾಗಿ ಡಿನೋಟಿಫಿಕೇಷನ್ ಆಗಿದೆ. ಆಗ ಮಾಲೀಕ ನಿಂಗ ಜೀವಂತವಾಗಿರಲಿಲ್ಲ. ಪರಿಹಾರ ನಿಗದಿಪಡಿಸಿದ 48 ದಿನಗಳ ಬಳಿಕ ಡಿನೋಟಿಫಿಕೇಷನ್ ಮಾಡಲಾಗಿದೆ.
ಮುಡಾ ಹೆಸರಿಗೆ ಕಂದಾಯ ದಾಖಲೆಗಳಿವೆ. 2004ರವರೆಗೆ ಹಲವು ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಕೆಸರೆ ಗ್ರಾಮದ 464 ಸರ್ವೆ ನಂಬರ್ ಅನ್ನು ಖುಷ್ಕಿ ಜಮೀನೆಂದು ಉಲ್ಲೇಖಿಸಿದ್ದಾರೆ. ಅಷ್ಟರಲ್ಲಾಗಲೇ ದೇವನೂರು ಬಡಾವಣೆಯಾಗಿ ನಿವೇಶನ ಹಂಚಲಾಗಿತ್ತು. 2004ರಲ್ಲಿ ಸಿಎಂ ಮೈದುನ ಮಲ್ಲಿಕಾರ್ಜುನಸ್ವಾಮಿ ಎಂಬುವರು ಖರೀದಿಸಿದ್ದು, ಅಸ್ತಿತ್ವವೇ ಇಲ್ಲದ ಕೃಷಿ ಭೂಮಿಗೆ 2005 ಜು.15 ರಂದು ಭೂಪರಿವರ್ತನೆ. ಕೃಷಿಯೇತರ ವಾಸದ ಉದ್ದೇಶಕ್ಕೆ ಪರಿವರ್ತನೆ ಮಾಡಲಾಗಿದೆ ಎಂದು ವಾದಿಸಿದರು.
ಡಿನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಭೂಮಿ ಪರಿವರ್ತನೆ ಆದಾಗಲೂ ಡಿಸಿಎಂ ಆಗಿದ್ದರು. 50-50 ಹಂಚಿಕೆ ಕೇಳಿದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು ಎಂದು ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥರೆಡ್ಡಿ ವಾದಿಸಿದರು.