ಬೆಂಗಳೂರು: ನಟ ವಿಷ್ಣುವರ್ಧನ್ (Vishnuvardhan) ಸಮಾಧಿ ನೆಲಸಮ ಆಗುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಇಂದು ಅನಿರುದ್ಧ ಅಭಿಮಾನಿಗಳು ಹಾಗೂ ಮಾಧ್ಯಮಗಳ ಮುಂದೆ ಚರ್ಚೆ ನಡೆಸಿದ್ದಾರೆ.
ವಿಷ್ಣು ಮನೆಯಲ್ಲಿ ನಡೆದ ಸಭೆಯಲ್ಲಿ ಸುದೀಪ್ ಅವರ ಹೆಸರನ್ನು ತಗೆದುಕೊಳ್ಳದೇ, ಇಲ್ಲಿಯವರೆಗೂ ಜಾಗ ಖರೀದಿ ಯಾಕೆ ಮಾಡಿಲ್ಲ? ಅಂತ ಅನಿರುದ್ಧ ಪ್ರಶ್ನಿಸಿದರು. ನಟ ವಿಷ್ಣುವರ್ಧನ್ ಸಮಾಧಿ ನೆಲಸಮವಾಗುತ್ತಿದ್ದಂತೆ ಹಲವಾರು ಟೀಕೆಗಳು ಕೇಳಿ ಬಂದಿದ್ದವು. ಸ್ವತಃ ವಿಷ್ಣುವರ್ಧನ್ ಕುಟುಂಬವೂ ಇದರ ಹಿಂದೆ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಸಮಾಧಿ ಉಳಿಸಿಕೊಳ್ಳಲು ಅಭಿಮಾನಿಗಳು ಮಾಡಿದ ಹೋರಾಟಕ್ಕೆ ವಿಷ್ಣು ಕುಟುಂಬದ ಬೆಂಬಲವಿರಲಿಲ್ಲ ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ದೂರ ಉಳಿಯುವುದಕ್ಕಾಗಿಯೇ ವಿಷ್ಣು ಕುಟುಂಬ ಹಣ ಪಡೆದಿದೆ ಅಂತಾನೂ ಆರೋಪ ಹೊರಸಲಾಗಿತ್ತು. ಹೀಗಾಗಿ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ ಅಭಿಮಾನಿಗಳ ಸಭೆ ಕರೆದಿದ್ದರು. ಈ ವೇಳೆ ಅವರು ವಿಷ್ಣು ಸಮಾಧಿ ಕುರಿತ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದಿದ್ದಾರೆ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ (Abhiman Studio) ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿತ್ತು. ಸಮಾಧಿ ಉಳಿಯಬೇಕು ಅಂತ ಬಯಸಿದ್ದವರಲ್ಲಿ ನಾನೂ ಒಬ್ಬ. ಸಮಾಧಿ ನೆಲಸಮ ಆಗಿದ್ದರ ಹಿಂದೆ ತಾವಾಗಲಿ, ತಮ್ಮ ಕುಟುಂಬವಾಗಲಿ ಇಲ್ಲ. ಅಭಿಮಾನ ಸ್ಟುಡಿಯೋದಲ್ಲಿ ಸ್ಮಾರಕ ಆಗಬೇಕು ಎಂದು ನಾವು ಸಾಕಷ್ಟು ಹೋರಾಟ ಮಾಡಿದೇವು. ಆದರೆ, ಅದು ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರಿಗೆ ಶಿಫ್ಟ್ ಮಾಡಲಾಯಿತು ಎಂದಿದ್ದಾರೆ.