ಬೇಲೆಕೇರಿ ಬಂದರಿನ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಸ್ ಸೈಲ್ ಅವರಿಗೆ ಕೋರ್ಟ್ ಇಂದು ಶಿಕ್ಷೆ ಪ್ರಕಟಿಸಿದೆ.
ಶಾಸಕ ಸೈಲ್ ಅವರಿಗೆ 7 ವರ್ಷ ಜೈಲು ಹಾಗೂ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಸೈಲ್ ಅವರಿಗೆ ಅ. 24ರಂದೇ ಕೋರ್ಟ್ ದೋಷಿ ಎಂದು ಪ್ರಕಟಿಸಿತ್ತು. ಹೀಗಾಗಿ ಅಂದೇ ಅವರ ಬಂಧನವೂ ಆಗಿತ್ತು. ಇಂದು ಈ ಪ್ರಕರಣದ ತೀರ್ಪು ಪ್ರಕಟವಾಗಿದೆ. ಏಳು ವರ್ಷಗಳ ಕಾರಾಗೃಹ ಶಿಕ್ಷೆ ಜೊತೆಗೆ 9 ಕೋಟಿ 60 ಲಕ್ಷ ರೂ. ದಂಡ ವಿಧಿಸಲಾಗಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣ ಬರೋಬ್ಬರಿ 14 ವರ್ಷಗಳ ಹಿಂದಿನ ಕೇಸ್ ಆಗಿದೆ. ಇದು ಭಾರೀ ಸದ್ದು ಮಾಡಿತ್ತು.
ಉತ್ತರ ಕನ್ನಡದ ಬೇಲೆಕೇರಿ ಎನ್ನುವ ಬಂದರಿನಿಂದ ಕಬ್ಬಿಣದ ಅದಿರು ಕಳ್ಳತನ ಮತ್ತು ಅಕ್ರಮ ರಫ್ತು ವಿಚಾರಕ್ಕೆ ಸಂಬಂಧಿಸಿದ ಕೇಸ್ ಇದು. ಶಾಸಕ ಸತೀಶ್ ಸೈಲ್ ವಶಕ್ಕೆ ಪಡೆಯುವಂತೆ ಕೋರ್ಟ್ ಹೇಳಿತ್ತು. ಅದರಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಬರೋಬ್ಬರಿ 200 ಕೋಟಿ ರೂ.ಗೂ ಹೆಚ್ಚಿನ ಅಕ್ರಮ ನಡೆದಿದೆ ಎನ್ನುವ ಆರೋಪವಿದೆ. 200 ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಈ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಬಂಧನದಲ್ಲಿದ್ದರು. ಈ ಕುರಿತು ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.