ಕೊಲೆ ಕೇಸ್ ನಲ್ಲಿ ನಟ ದರ್ಶನ್ (Darshan Thoogudeepa) ಪೊಲೀಸರ ಅತಿಥಿಯಾಗಿದ್ದಾರೆ. ಆದರೆ, ಅವರಿಗೆ ಅಡ್ವಾನ್ಸ್ ಕೊಟ್ಟಿರುವ ನಿರ್ಮಾಪಕರು ಈಗ ಬೀದಿಗೆ ಬರುವಂತಾಗಿದೆ.
‘ಡೆವಿಲ್’ ಸಿನಿಮಾದ ಚಿತ್ರೀಕರಣಕ್ಕೆಂದು ಮೈಸೂರಿಗೆ ತೆರಳಿದ್ದಾಗ ಜೂನ್ 11 ರಂದು ದರ್ಶನ್ ನನ್ನು ಬಂಧಿಸಲಾಗಿದೆ. ‘ಡೆವಿಲ್’ ಸಿನಿಮಾದ ನಿರ್ಮಾಪಕರಂತೂ ಕೋಟ್ಯಂತರ ರೂಪಾಯಿ ಹಣವನ್ನು ಈಗಾಗಲೇ ಸಿನಿಮಾ ಮೇಲೆ ಹಾಕಿದ್ದಾರೆ. ‘ಡೆವಿಲ್’ ಮಾತ್ರ ಅಲ್ಲದೆ ಇನ್ನೂ ಕೆಲವು ನಿರ್ಮಾಪಕರಿಂದ ಹಣ ಪಡೆದಿದ್ದಾರೆ ಎನ್ನಲಾಗಿದೆ.
‘ಡೆವಿಲ್’ ಸಿನಿಮಾದ ಚಿತ್ರೀಕರಣ ಆರಂಭವಾಗಿ ಕೇವಲ 25 ದಿನ ಕಳೆದಿವೆ. ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ಆಕ್ಷನ್ ದೃಶ್ಯದ ಚಿತ್ರೀಕರಣ ಮಾಡುವ ಹಂತದಲ್ಲಿ ದರ್ಶನ್ ಪೆಟ್ಟು ಮಾಡಿಕೊಂಡಿದ್ದರು. ಎಡಗೈಗೆ ಗಾಯವಾಗಿದ್ದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಸಿನಿಮಾ ಶೂಟಿಂಗ್ ಮುಂದೂಡಲಾಗಿತ್ತು. ದರ್ಶನ್ ಬಂಧನವಾಗುವ ಎರಡು ದಿನಗಳ ಮುಂಚೆಯಷ್ಟೆ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಅಷ್ಟರಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾರೆ.
‘ಡೆವಿಲ್’ ಸಿನಿಮಾಕ್ಕೆ ದರ್ಶನ್ ಗೆ 22 ಕೋಟಿ ರೂ. ಸಂಭಾವನೆ ನಿಗದಿಪಡಿಸಲಾಗಿತ್ತು ಎನ್ನಲಾಗಿದೆ. ಈಗಾಗಲೇ ಮೂರು ಕೋಟಿ ರೂಪಾಯಿ ಸಂಭಾವನೆಯನ್ನೂ ಸಹ ದರ್ಶನ್, ನಿರ್ಮಾಪಕರಿಂದ ಪಡೆದಿದ್ದಾರೆ ಎನ್ನಲಾಗಿದೆ. ಸಿನಿಮಾದ 25 ದಿನ ಶೂಟಿಂಗ್, ಸೆಟ್ ಗಳ ನಿರ್ಮಾಣ, ಇತರೆ ಕಲಾವಿದರಿಗೆ ಸಂಭಾವನೆ, ಚಿತ್ರೀಕರಣದ ಯೂನಿಟ್ ಬುಕ್ ಇನ್ನೂ ಹಲವಾರು ವಿಭಾಗಗಳಿಗೆ ನಿರ್ಮಾಪಕರು ಈಗಾಗಲೇ ಹಣ ಖರ್ಚು ಮಾಡಿದ್ದು, ಸದ್ಯಕ್ಕೆ ದರ್ಶನ್ ಜೈಲು ಸೇರಿರುವುದು ಕಷ್ಟ ತಂದಿದೆ.
ಅಲ್ಲದೇ, ಈ ಚಿತ್ರವನ್ನು ಡಿ. 25ಕ್ಕೆ ಬಿಡುಗಡೆ ಮಾಡಲು ಚಿತ್ರ ತಂಡ ಮುಂದಾಗಿತ್ತು. ಈಗ ಸಿನಿಮಾದ ಚಿತ್ರೀಕರಣವನ್ನೇ ನಿಲ್ಲಿಸಿದ್ದು, ಸಿನಿಮಾದ ಬಿಡುಗಡೆ ಇನ್ನಷ್ಟು ವಿಳಂಬವಾಗಲಿದೆ. ಸದ್ಯಕ್ಕಂತೂ ಸಿನಿಮಾದ ಶೂಟಿಂಗ್ ನ್ನು ಮಿಲನಾ ಪ್ರಕಾಶ್ ನಿಲ್ಲಿಸಿದ್ದಾರೆ. ದರ್ಶನ್ ಹೊರಬಂದ ಮೇಲಷ್ಟೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಡೇವಿಲ್ ನಂತರ ದರ್ಶನ್ ‘ಸಿಂಧೂರ ಲಕ್ಷ್ಮಣ’ ಸಿನಿಮಾದಲ್ಲಿ ನಟಿಸಬೇಕಿತ್ತು. ‘ಕ್ರಾಂತಿ’ ಸಿನಿಮಾ ಮಾಡಿದ್ದ ನಿರ್ಮಾಪಕ ಬಿ ಸುರೇಶ್ ನಿರ್ಮಿಸಿ, ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲು ಸಿದ್ಧತೆ ನಡೆದಿತ್ತು.
ಈ ಚಿತ್ರಕ್ಕಾಗಿಯೂ ದರ್ಶನ್ 3 ಕೋಟಿ ರೂ. ಹಣ ಪಡೆದಿದ್ದರು. ಅಲ್ಲದೇ, ಜೋಗಿ ಪ್ರೇಮ್ ನಿರ್ದೇಶನದ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೋಡಕ್ಷನ್ ನಿರ್ಮಿಸಲಿರುವ ಸಿನಿಮಾವನ್ನು ಕೂಡ ದರ್ಶನ್ ಒಪ್ಪಿದ್ದರು. ಬಹುಕೋಟಿ ವೆಚ್ಚದ ಸಿನಿಮಾ ಮಾಡಲು ದರ್ಶನ್ ಒಪ್ಪಿಗೆ ನೀಡಿದ್ದರು. ಈ ಚಿತ್ರಕ್ಕೆ ಅಡ್ವಾನ್ಸ್ ಹಣ ಅಂತಾ ದರ್ಶನ್ 3 ರಿಂದ 5 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ.
ಈ ಪ್ರಾಜೆಕ್ಟ್ ಮುಗಿದ ಮೇಲೆ ದರ್ಶನ್ ಮತ್ತೆ ಜಗ್ಗುದಾದ ಸಿನಿಮಾ ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ ಜೊತೆ ಸಿನಿಮಾ ಮಾಡುವ ಯೋಜನೆ ಇತ್ತು. ಆ ತಂಡದಿಂದ ಕೂಡ ಅಡ್ವಾನ್ಸ್ ಪಡೆದಿದ್ದರು. ಈ ಚಿತ್ರಗಳ ಬಳಿಕ ದರ್ಶನ್ ತೆಲುಗಿನ ‘ಅತ್ತಾರಿಂಟಿಕಿ ದಾರೇದಿ’ ಚಿತ್ರದ ನಿರ್ಮಾಪಕರಾದ ಬಿ.ವಿ.ಎಸ್. ಎನ್ ಪ್ರಸಾದ್ ಜೊತೆ ಸಿನಿಮಾ ಮಾಡಲು ಮಾತುಕತೆ ಮಾಡಿಕೊಂಡಿದ್ದರು. ಇದಕ್ಕಾಗಿ 25 ಲಕ್ಷ ಅಡ್ವಾನ್ಸ್ ಹಣ ಸಹ ಪಡೆದಿದ್ದರು ನ್ನಲಾಗಿದೆ. ಇದರೊಂದಿಗೆ ತಮಿಳು ನಿರ್ಮಾಪಕ ರಮೇಶ್ ಪಿಳ್ಳೈ ಜೊತೆ ಚಿತ್ರ ಮಾಡುವುದಾಗಿ ದರ್ಶನ್ ಮಾತುಕತೆ ಆಗಿತ್ತು. ಈ ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ಹಣ ಅಂತಾ 25 ಲಕ್ಷ ಪಡೆದಿದ್ದರು ಎನ್ನಲಾಗಿದೆ. ಅಲ್ಲದೇ, ಹೈದರಾಬಾದ್ ನಿರ್ಮಾಪಕ ರಘುನಾಥ್ ಎಂಬುವರ ಜೊತೆ ಸಿನಿಮಾ ಮಾತುಕತೆ ಆಗಿದೆ. ಈ ಚಿತ್ರಕ್ಕೂ ದರ್ಶನ್ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈಗ ದರ್ಶನ್ ಆರೋಪಿಯಾಗಿದ್ದು, ಜೈಲು ಶಿಕ್ಷೆಯಾದರೆ, ಇವರ ಹಣ ನೀರಲ್ಲಿ ಮುಳಗಿದಂತೆಯೇ ಎನ್ನಲಾಗುತ್ತಿದೆ.
