ಬೆಂಗಳೂರು: ಮುಡಾ ಪ್ರಕರಣದ ಆರೋಪ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜನಪ್ರತಿನಿಧಿಗಳ ಕೋರ್ಟ್ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿತ್ತು. ಅಲ್ಲದೇ, ಮೈಸೂರು ಲೋಕಾಯುಕ್ತ ಎಸ್ಪಿಗೆ ತನಿಖೆಯ ಜವಾಬ್ದಾರಿ ನೀಡಿ, 3 ತಿಂಗಳ ಕಾಲಮಿತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ತನಿಖೆ ಬಗ್ಗೆ ಲೋಕಾಯುಕ್ತ ಐಜಿಪಿ, ಎಡಿಜಿಪಿ, ಮೈಸೂರು ಲೋಕಾಯುಕ್ತ ಎಸ್ಪಿ ಇಂದು ಸಭೆ ನಡೆಸಿದರು. ಇದನ್ನು ಗಮನಿಸಿದರೆ, ಸಿಎಂ ವಿರುದ್ಧ ಯಾವುದೇ ಸಂದರ್ಭದಲ್ಲಾದರೂ ಎಫ್ ಐಆರ್ ದಾಖಲಾಗುವ ಸಾಧ್ಯತೆ ಇದೆ. ಈ ಮಧ್ಯೆ ಸಿಎಂಗೆ ಸಿಬಿಐ ತನಿಖೆಯ ಭಯ ಕೂಡ ಕಾಡುತ್ತಿದೆ ಎಂಬ ಸಂಶಯ ಹುಟ್ಟಿಕೊಂಡಿದೆ. ಹೀಗಾಗಿಯೇ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸಿಬಿಐಗೆ ಇದ್ದ ಅಧಿಕಾರವನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿದೆ.
ಕೇಂದ್ರ ಸರ್ಕಾರ ಯಾವುದೇ ಸಂದರ್ಭದಲ್ಲಿ ಸಿಬಿಐ ಅನ್ನ ದುರ್ಬಳಕೆ ಮಾಡಿಕೊಳ್ಳಬಹುದೆಂಬ ಭೀತಿ ಸರ್ಕಾರಕ್ಕಿದೆ. ಇದರ ಸುಳಿವು ಅರಿಯುತ್ತಿದ್ದಂತೆ ರಾಜ್ಯ ಸರ್ಕಾರ ಈ ದಿಟ್ಟ ಹಾಗೂ ಜಾಣ ಹೆಜ್ಜೆ ಇಟ್ಟಿದೆ. ಈ ಮೂಲಕ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಿಬಿಐ ನೇರ ಪ್ರವೇಶಕ್ಕೆ ಬ್ರೇಕ್ ಹಾಕಲಾಗುತ್ತಿದೆ.
ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಸಿಬಿಐ ದುರ್ಬಳಕೆ ಆರೋಪ ಕೇಳಿ ಬಂದಿದೆ. ಹೀಗಾಗಿ ಕರ್ನಾಟಕ ನಾಯಕರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಯಾವುದೇ ಪ್ರಕರಣದೊಂದಿಗೆ ನೇರ ಪ್ರವೇಶ ಮಾಡುವಂತಿಲ್ಲ. ಸರ್ಕಾರದ ಅನುಮತಿ ಇಲ್ಲದಂತೆ ಸಿಬಿಐ ಪ್ರವೇಶಿಸುವಂತಿಲ್ಲ. ರಾಜ್ಯ ಸರ್ಕಾರದ ಅನುಮತಿ ದೊರೆತರಷ್ಟೇ ಎಂಟ್ರಿಗೆ ಅವಕಾಶ ನೀಡುವ ನಿರ್ಧಾರವನ್ನು ಇಂದು ಕೈಗೊಳ್ಳಲಾಗಿದೆ.