ಬೆಂಗಳೂರು: ದೇಶ ಹಾಗೂ ಕರ್ನಾಟಕದಲ್ಲಿರುವುದು ಅಸಲಿ ಕಾಂಗ್ರೆಸ್ ಪಕ್ಷ ಅಲ್ಲ. ನಕಲಿ ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಅವರು, ರಾಜ್ಯದ ಜನರ ಕೋಟಿಗಟ್ಟಲೆ ತೆರಿಗೆ ಹಣವನ್ನು ಬಳಸಿಕೊಂಡು ಬೆಳಗಾವಿಯಲ್ಲಿ ಮಹಾಧಿವೇಶನ ಮಾಡಲು ಹೊರಟಿರುವುದು ಸರಿಯಲ್ಲ. ಈ ನಕಲಿ ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಗಾಳಿಗೆ ತೂರಿದೆ. ಈ ಪಕ್ಷಕ್ಕೆ ಗಾಂಧೀಜಿ ಮತ್ತು ಅಂಬೇಡ್ಕರ ಹೆಸರು ಹೇಳುವ ನೈತಿಕತೆ, ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಕಲಿ ಕಾಂಗ್ರೆಸ್ಸಿನ ಈ ನೀತಿಯ ವಿರುದ್ಧ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನವನ್ನು ವಿರೋಧಿಸಿ ನಾಳೆ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದ್ದೇವೆ. ದೇಶದ ಅಖಂಡತೆ, ಸಮಗ್ರತೆ ಬಗ್ಗೆ ಈ ಪಕ್ಷಕ್ಕೆ ಬದ್ಧತೆ ಇಲ್ಲ. ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರೇ ಮಾಡಿದ್ದಾರೆ. ಬಾಬಾ ಸಾಹೇಬರಿಗೆ ಸಂಬಂಧಿಸಿದ 5 ಪ್ರಮುಖ ಸ್ಥಳಗಳನ್ನು ಪ್ರಧಾನಿ ನರೇಂದ್ರ ಮೋದಿಜೀ ಅವರು ಪಂಚತೀರ್ಥಗಳನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದ್ದಾರೆ.