ನವದೆಹಲಿ: ಇಂದು ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದರು. ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರ ಬಲಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ರಕ್ಷಣಾ ಕ್ಷೇತ್ರಕ್ಕಾಗಿ ಗಿ 6.2 ಲಕ್ಷ ಕೋಟಿ ರೂ.ಗಳನ್ನು ಘೋಷಿಸಲಾಗಿದೆ. ಕಳೆದ ವರ್ಷಕ್ಕಿಂತ ಸರಿಸುಮಾರು ಶೇ. 3.4ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ರಕ್ಷಣಾ ಕ್ಷೇತ್ರಕ್ಕೆ ಸರ್ಕಾರ 5.93 ಲಕ್ಷ ಕೋಟಿ ರೂ. ಘೋಷಿಸಲಾಗಿತ್ತು. ಒಟ್ಟಾರೆ ಬಜೆಟ್ ನೋಡಿದರೆ ರಕ್ಷಣಾ ಕ್ಷೇತ್ರಕ್ಕೆ ಗರಿಷ್ಠ ಪಾಲು ಶೇ. 8ರಷ್ಟು ಇಟ್ಟುಕೊಳ್ಳಲಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡಿಸಿದರು. ಈ ಬಜೆಟ್‌ನಲ್ಲಿ ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಮೇಲೆ ಕೇಂದ್ರೀಕರಿಸುವುದರ ಜೊತೆಗೆ ರಕ್ಷಣಾ ಬಜೆಟ್‌ಗೆ ಗರಿಷ್ಠ ಅನುದಾನ ಮೀಸಲಿಡಲಾಗಿದೆ. ಸರ್ಕಾರವು ರಕ್ಷಣೆಗಾಗಿ 6 ಲಕ್ಷದ 21 ಸಾವಿರದ 940 ಕೋಟಿ ರೂ. ಅನುದಾನ ಮೀಸಲಿಟ್ಟಿದೆ.
ರಕ್ಷಣಾ ಬಜೆಟ್ ಅನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗವು ಆದಾಯ. ಎರಡನೆಯದು ಬಂಡವಾಳ ವೆಚ್ಚ ಮತ್ತು ಮೂರನೆಯದು ಪಿಂಚಣಿ. ರಕ್ಷಣಾ ವಲಯದಲ್ಲಿ ಸಂಬಳವನ್ನು ಆದಾಯ ಬಜೆಟ್‌ನಿಂದ ವಿತರಿಸಲಾಗುತ್ತದೆ. ಯಾವುದೇ ದೇಶದ ಸೇನೆಯ ದೊಡ್ಡ ಶಕ್ತಿ ಎಂದರೆ ಅದರ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು ಮತ್ತು ಮದ್ದುಗುಂಡುಗಳು. ರಕ್ಷಣಾ ಬಜೆಟ್‌ನಲ್ಲಿ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳ ಖರೀದಿಗೆ 1 ಲಕ್ಷದ 72 ಸಾವಿರ ಕೋಟಿ ರೂ. ಘೋಷಿಸಲಾಗಿದೆ. ಈ ಹಣದಲ್ಲಿ ವಿಮಾನ ಮತ್ತು ಏರೋ ಇಂಜಿನ್ ಉಪಕರಣಗಳನ್ನು ಖರೀದಿಸಲಾಗುವುದು. ಇದಲ್ಲದೇ ಭಾರೀ ಮತ್ತು ಮಧ್ಯಮ ವಾಹನಗಳು, ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಖರೀದಿಸಲಾಗುವುದು ಎಂದು ಹೇಳಿದ್ದಾರೆ.
ರಕ್ಷಣಾ ವಲಯವನ್ನು ಹಾಗೂ ಸೇನೆಯನ್ನು ಸ್ವಾವಲಂಬಿಯನ್ನಾಗಿ ಮಾಡಲು ರಕ್ಷಣಾ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.