ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಬಜೆಟ್ ಮಂಡನೆಯಾಗಿದೆ. ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ 19.927 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಯಾವುದೇ ಹೊಸತನವಿರದ ಕೇವಲ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟು ರೂಪಿಸಿರುವ ಕಾಂಗ್ರೇಸ್ ಸರ್ಕಾರದ ಬಜೆಟ್ ಇದಾಗಿದೆ ಎನ್ನುವ ಅನುಮಾನ ಮೇಲ್ನೋಟಕ್ಕೆ ಕಾಣುವಂತಾಗಿದೆ.
ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ.ಚುನಾಯಿತ ಪ್ರತಿನಿಧಿಗಳಿಲ್ಲದೆ ಮಂಡಿಸುತ್ತಿರುವ 5ನೇ ಪಾಲಿಕೆ ಬಜೆಟ್ ಇದಾಗಿದ್ದು .. ಹೊಸದೆನ್ನುವ ಯಾವುದೇ ಮಹತ್ವದ ಯೋಜನೆಗಳು ಬಜೆಟ್ ನಲ್ಲಿಲ್ಲ. ಹಳೆಯ ಯೋಜನೆಗಳ ಜತೆಗೆ ಒಂದಷ್ಟು ಅಂಶಗಳನ್ನು ಬಜೆಟ್ ನಲ್ಲಿ ಅಳವಡಿಸಲಾಗಿದೆ. ಗ್ರೇಟರ್ ಬೆಂಗಳೂರು ರಚನೆಗೂ ಮುನ್ನ ಮಂಡಿಸುತ್ತಿರುವ ಬಿಬಿಎಂಪಿಯ ಕೊನೆಯ ಬಜೆಟ್‌ನಲ್ಲಿ 19.927 ಕೋಟಿ ರೂ.ಗಳ ಬೃಹತ್ ಯೋಜನೆಗಳನ್ನು ಘೋಷಿಸಲಾಗಿದೆ.
ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಕ್ಷಮದಲ್ಲಿ ಪುರಭವನದಲ್ಲಿಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್‌ಕುಮಾರ್ ಬಿಬಿಎಂಪಿ ಬಜೆಟ್ ಮಂಡಿಸಿದರು.
ಕಟ್ಟುವೆವು ನಾವು ಹೊಸ ನಾಡೊಂದನ್ನು ಎಂಬ ಕವಿವಾಣಿಯನ್ನು ಪ್ರಸ್ತಾಪಿಸಿದ ಹರೀಶ್‌ಕುಮಾರ್ ಅವರು, ಬ್ರ್ಯಾಂಡ್ ಬೆಂಗಳೂರು ದೃಷ್ಟಿಕೋನಕ್ಕೆ ಅನುಗುಣವಾಗಿ ನಗರವನ್ನು ಆಧುನಿಕ ನಗರವನ್ನಾಗಿ ಪರಿವರ್ತಿಸುವ ಘೋಷಣೆ ಮಾಡಿದರು. ಸುಗಮ ಸಂಚಾರ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಟೆಕ್ ಬೆಂಗಳೂರು, ಶಿಕ್ಷಣ ಬೆಂಗಳೂರು, ಆರೋಗ್ಯಕರ ಬೆಂಗಳೂರು, ರೋಮಾಂಚಕ ಬೆಂಗಳೂರು ಮತ್ತು ನೀರಿನ ಭದ್ರತೆ ಬೆಂಗಳೂರು ಎಂಬ 8 ವಿಭಾಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ 1790 ಕೋಟಿ ರೂ.ಗಳ ಅನುದಾನವನ್ನು ನಗರದ ಅಭಿವೃದ್ದಿಗೆ ಸದ್ಬಳಕೆ ಮಾಡಲಾಗುತ್ತಿದೆ ಎಂದರು. ಪ್ರಸಕ್ತ ಸಾಲಿನಲ್ಲೂ 5716 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ ಎಂದರು.
ನಗರದಲ್ಲಿ ಡಿಜಿಟಲ್ ಇ-ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದ್ದು, ನಾಗರಿಕರು ಯಾವುದೇ ಸಮಯದಲ್ಲಾದರೂ ಆನ್‌ಲೈನ್ ಮೂಲಕ ಇ-ಖಾತಾ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎಐ ತಂತ್ರಜ್ಞಾನ ಮೂಲಕ ಒಂದು ಸಾವಿರ ಕೋಟಿ ರೂ.ಗಳ ಆದಾಯ ಬರಲಿದೆ ಅಂತ ತಿಳಿಸಿದರು. ಇನ್ನೂ .ಅವಧಿ ಮುಗಿದಿರುವ ಪಾಲಿಕೆ ಆಸ್ತಿಗಳ ಗುತ್ತಿಗೆ ನವೀಕರಣ ಮಾಡಿ ಮಾರ್ಗಸೂಚಿ ಬಾಡಿಗೆ ಆಧಾರದ ಮೇಲೆ ಮರುಗುತ್ತಿಗೆ ನೀಡುವ ಮೂಲಕ 210 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.
ಇತ್ತ ಪಾಲಿಕೆ ಆದಾಯ ಹೆಚ್ಚಿಸಲು ಹೊಸ ಜಾಹಿರಾತು ನಿಯಮ ಜಾರಿಗೆ ಬಂದಿದ್ದು, ವಿವಿಧ ಪ್ರದೇಶಗಳಲ್ಲಿ ವಾಣಿಜ್ಯ ಜಾಹಿರಾತುಗಳನ್ನು ಪ್ರದರ್ಶಿಸಲು ಬಹಿರಂಗ ಟೆಂಡರ್ ಕರೆದು ಈ ಮೂಲಕ 750 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ. ಇನ್ನೂ ..ನಂಬಿಕೆ ನಕ್ಷೆ ಮೂಲಕ 375 ಚ.ದ.ಮೀವರೆಗಿನ ನಿವೇಶನದಲ್ಲಿ 4 ವಸತಿ ಘಟಕಗಳನ್ನು ನಿರ್ಮಿಸಲು ಸ್ವಯಂಚಾಲಿತ ನಕ್ಷೆ ಅನುಮೋದನೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ..ಜನರು ರಸ್ತೆಗಳಲ್ಲಿ ವಾಹನ ನಿಲ್ಲಿಸುವುದನ್ನು ತಪ್ಪಿಸಿ ತಮ್ಮ ನಿವಾಸದೊಳಗೆ ವಾಹನಗಳನ್ನು ಪಾರ್ಕಿಂಗ್ ಮಾಡಿಕೊಳ್ಳುವ ಉದ್ದೇಶದಿಂದ ಸ್ಟಿಲ್ ಮಹಡಿಗಳ ಎತ್ತರವನ್ನು 4.5 ಮೀಟರ್‌ಗಳಿಗೆ ಎತ್ತರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಅಂತ ಹೇಳಿದರು.
ಪ್ರೀಮಿಯಮ್ ಎಫ್‌ಎಆರ್ ನೀತಿ ಮೂಲಕ 2000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ..ಪ್ರಸಕ್ತ ಸಾಲಿನಲ್ಲಿ 12,692 ಪೌರಕಾರ್ಮಿಕರನ್ನು ನೇರ ವೇತನದ ಮೂಲಕ ಖಾಯಂಗೊಳಿಸಲು ತೀರ್ಮಾನಿಸಲಾಗಿದೆ.. ಮಹಿಳೆಯರು, ಎಸ್ಸಿ-ಎಸ್ಟಿ ಹಿಂದುಳಿದವರು, ಅಲ್ಪಸಂಖ್ಯಾತರು, ತೃತೀಯ ಲಿಂಗಿ ಸಮುದಾಯಕ್ಕೆ 500 ಎಲೆಕ್ಟ್ರಿಕ್ ಆಟೋ ಖರೀದಿಸಲು ಅನುಕೂಲವಾಗುವಂತೆ ಇ-ಸಾರಥಿ ಯೋಜನೆಯನ್ನು ಜಾರಿಗೆ ತರಲು 10 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಕಲ್ಪನೆಯಡಿ ನಗರದ ಒಂದು ಸಾವಿರ ಅರ್ಹ ಉದ್ಯೋಗಸ್ಥ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಹಾಗೂ ವಿಶೇಷ ಚೇತನರಿಗೆ ಮೂರು ಚಕ್ರ ವಾಹನ ನೀಡಲು 15 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಎಸ್ಸಿ-ಎಸ್ಟಿ, ಓಬಿಸಿ, ವಿಶೇಷಚೇತನರಿಗಾಗಿ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಲು 130 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ.
ಒಂಟಿಮನೆ ನಿರ್ಮಾಣಕ್ಕೆ ನೀಡುತ್ತಿರುವ 5 ಲಕ್ಷ ರೂ.ಗಳ ಸಹಾಯಧನವನ್ನು 6 ಲಕ್ಷಕ್ಕೆ ಹೆಚ್ಚಿಸಲಾಗಿದೆ. 1 ಸಾವಿರ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವುದು, ಹಿರಿಯ ನಾಗರಿಕರು ಜೀವನೋಪಾಯ ವಸ್ತು ಖರೀದಿಗೆ 2 ಕೋಟಿ ರೂ, ಯುವ ಜನರ ಕೌಶಲ್ಯಾಭಿವೃದ್ಧಿಗೆ 5 ಕೋಟಿ, ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 10 ಕೋಟಿ, ನಿರಾಶ್ರಿತರ ತಂಗುದಾಣ ನಿರ್ವಹಣೆಗೆ 5 ಕೋಟಿ ಹಾಗೂ ಸಾರ್ವಜನಿಕರ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ 2 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ 7 ಸಾವಿರ ಕೋಟಿ ರೂ.ಗಳನ್ನು ನೀಡಿದೆ. ಇದೇ ರೀತಿ 15ನೇ ಹಣಕಾಸು ಆಯೋಗದಡಿಯಲ್ಲಿ 498, ರಾಜ್ಯ ಸರ್ಕಾರದ ಎಸ್‌ಎಫ್‌ಸಿ ಅನುದಾನದಲ್ಲಿ 562.43, ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ನಿಧಿಯಿಂದ 238 ಹಾಗೂ ಕೆರೆಗಳ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್‌ನ ಯೋಜನೆಯಡಿ 500 ಕೋಟಿ ರೂ.ಗಳ ಅನುದಾನ ನಿರೀಕ್ಷೆ ಮಾಡಲಾಗಿದೆ. ನಗರದಲ್ಲಿ ಅಂದಾಜು 42 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣ, 13200 ಕೋಟಿ ರೂ.ಗಳಲ್ಲಿ ಎಲಿವೇಟೆಡ್ ಕಾರಿಡಾರ್ ಹಾಗೂ ಗ್ರೇಟ್ ಸೆಪರೇಟರ್‌ಗಳ ನಿರ್ಮಾಣ, 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಂಯುಕ್ತ ಮೆಟ್ರೋ ಡಬಲ್ ಡಕ್ಕರ್ ರಸ್ತೆ ನಿರ್ಮಾಣ.. 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳ ಪಕ್ಕದಲ್ಲಿ ಸಂಪರ್ಕ ರಸ್ತೆ ನಿರ್ಮಾಣ, 6 ಸಾವಿರ ಕೋಟಿ ರೂ. ವೆಚ್ಚದಲ್ಲಿ ವೈಟ್‌ಟಾಪಿಂಗ್, 400 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್ ನಿರ್ಮಾಣ ಮಾಡಲಾಗುತ್ತಿದೆ.
ಇನ್ನೂ ..ಟಿಡಿಆರ್ ಬಳಸಿ ಆರ್‌ಟಿನಗರ ಪೊಲೀಸ್ ಠಾಣೆಯಿಂದ ಅಂಬೇಡ್ಕರ್ ಕಾಲೇಜುವರೆಗಿನ ರಸ್ತೆ, ಲಿಂಗರಾಜಪುರಂ, ಫ್ಲೈಓವರ್‌ರಸ್ತೆ, ಪುಲಿಕೇಶಿನಗರ ಶ್ಯಾಂಪುರ ಮುಖ್ಯರಸ್ತೆ, ಯಶವಂತಪುರದ ಕೆಂಚನಹಳ್ಳಿ ಮುಖ್ಯರಸ್ತೆ ಮತ್ತು ಮಹದೇವಪುರದ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು. ಗರ್ಭಿಣಿಯರ ಮತ್ತು ನವಜಾತ ಶಿಶುಗಳ ಸಮಗ್ರ ಸಮರ್ಪಕ ನಿರಂತರ ಆರೈಕೆಗಾಗಿ ನೂತನವಾದ ಎಐ ತಂತ್ರಜ್ಞಾನದೊಂದಿಗೆ ಸೇವ್ ಮಾಮ್ ಎಂಬ ತಾಯಿ-ಮಕ್ಕಳ ಆರೈಕೆ ವೇದಿಕೆಯನ್ನು ಪ್ರಾರಂಭಿಸಲಿದೆ. ಪಾಲಿಕೆಯ 300 ಹಾಸಿಗೆಯುಳ್ಳ ಎಂ.ಸಿ.ಲೇಔಟ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಲಾಗುತ್ತಿದ್ದು, ಇಲ್ಲಿ ಹೊಸದಾಗಿ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆಗೆ ಅಂದಾಜು 633 ಕೋಟಿ ರೂ. ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ನಗರದ ಕಸವನ್ನು ಮುಂದಿನ 30 ವರ್ಷಗಳವರೆಗೆ ಸಮರ್ಪಕವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ನಗರದ 4 ದಿಕ್ಕುಗಳ 100 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಪ್ಯಾಕೇಜ್ ಯೋಜನೆ ರೂಪಿಸಲಾಗಿದೆ…ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಸಸಿಗಳನ್ನು ನೆಡಲು ಅನುಕೂಲವಾಗುವಂತೆ 51.69 ಕೋಟಿ ನಿಗದಿಪಡಿಸಲಾಗಿದೆ. ಪ್ರಾಣಿಗಳ ರಕ್ಷಣೆಗೆ ವನ್ಯಜೀವಿ ಸಂರಕ್ಷಣಾ ತಂಡ ರಚಿಸಲಾಗಿದೆ. ಹಸಿರು ಬೆಂಗಳೂರು ಪರಿಕಲ್ಪನೆಯಡಿ 14 ಹೊಸ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದ್ದು, ಸಿಂಗಾಪುರಕೆರೆ ಸಮೀಪದ 20 ಎಕರೆ ಸರ್ಕಾರಿ ಜಮೀನಿನಲ್ಲಿ ವಿಶಾಲವಾದ ಸುಜ್ಜಜಿತ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ..ಇನ್ನೂ..
2000 ಕೋಟಿ ರೂ.ಗಳ ಅನುದಾನದಲ್ಲಿ ನಗರದ 860 ಕಿ.ಮೀ ಉದ್ದದ ರಾಜಕಾಲುವೆಗಳಿಗೆ 174 ಕಿ.ಮೀ ಉದ್ದದ ತಡೆಗೋಡೆ ನಿರ್ಮಿಸಲಾಗುತ್ತಿದೆ.
ಪ್ರವಾಹಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು 247.25 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಗರವನ್ನು ಆಕರ್ಷಣೀಯಗೊಳಿಸುವ ಉದ್ದೇಶದಿಂದ 50 ಕೋಟಿ ರೂ. ವೆಚ್ಚದಲ್ಲಿ ಅಲಂಕಾರಿಕ ದ್ವೀಪಗಳು, 25 ಕೋಟಿ ರೂ. ವೆಚ್ಚದಲ್ಲಿ ಜಂಕ್ಷನ್ ಸುಧಾರಣೆ, 50 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಟೆಕ್ ನಿರ್ಮಾಣ ಹಾಗೂ 25 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಸ್ಥಳಗಳ ಸುಂದರೀಕರಣಗೊಳಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಮಾಗಡಿ ಕೋಟೆ ಅಭಿವೃದ್ಧಿಗಾಗಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಾರಿ 50 ಕೋಟಿ ರೂ. ಬದಲಿಗೆ 100 ಕೋಟಿ ನೀಡಲಾಗಿದೆ. ಕೆಲವೊಂದು ಘೋಷಣೆ ಹೊರತುಪಡಿಸಿದ್ರೆ ಬಜೆಟ್ ಬಹುತೇಕ ಹಳೇ ಮದ್ಯ-ಹೊಸ ಸೀಸೆ ಎನ್ನುವಂತಾಗಿದೆ.ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಅಂಶ ಉಲ್ಲೇಖಿಸಿರುವ ವಿಶೇಷ ಆಯುಕ್ತರು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಹಣಕ್ಕಾಗಿ ಸಾಲಕ್ಕೆ ಮೊರೆ ಹೋಗುವುದಾಗಿಯೂ ಹೇಳಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.