ವಾಷಿಂಗ್ಟನ್/ಇಸ್ಲಾಮಾಬಾದ್: ಪಶ್ಚಿಮ ಏಷ್ಯಾ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಇಸ್ಲಾಮಾಬಾದ್‌ನಲ್ಲಿ ಇಂದು ಅಮೆರಿಕ ಮತ್ತು ಇರಾನ್ ನಡುವೆ ಮಹತ್ವದ ಮಾತುಕತೆಗಳು ನಡೆಯಲಿದ್ದು, ಒಂದು ವೇಳೆ ಈ ಸಂಧಾನ ಪ್ರಕ್ರಿಯೆ ವಿಫಲವಾದರೆ ಅಥವಾ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ನಿರಾಕರಿಸಿದರೆ ವಾಷಿಂಗ್ಟನ್‌ನ ಮುಂದಿನ ಯೋಜನೆಯೇನು ಎಂಬ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾದ ಉತ್ತರ ನೀಡಿದ್ದಾರೆ. ಇರಾನ್ ವಿರುದ್ಧದ ಸಂಘರ್ಷದಲ್ಲಿ ನಮಗೆ ಯಾವುದೇ ಪರ್ಯಾಯ ಯೋಜನೆಯ (Plan B) ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್, “ನಮಗೆ ಬ್ಯಾಕಪ್ ಪ್ಲಾನ್ ಬೇಕಿಲ್ಲ. ಇರಾನ್ ಸೇನೆ ಈಗಾಗಲೇ ಸೋಲನುಭವಿಸಿದೆ. ನಾವು ಅವರ ಮೇಲೆ ಭೀಕರವಾಗಿ ದಾಳಿ ನಡೆಸಿದ್ದೇವೆ. ಇದರಿಂದಾಗಿ ಅವರ ಕ್ಷಿಪಣಿ ಬಲ ಮತ್ತು ಉತ್ಪಾದನಾ ಸಾಮರ್ಥ್ಯಗಳು ತಳಮಟ್ಟಕ್ಕೆ ಕುಸಿದಿವೆ. ನಮ್ಮ ಸೇನೆಯು ಅದ್ಭುತವಾಗಿ ಕೆಲಸ ಮಾಡಿದೆ” ಎಂದು ಇರಾನ್‌ನ ಪ್ರಸ್ತುತ ಸ್ಥಿತಿಯನ್ನು ಲೇವಡಿ ಮಾಡುವುದರ ಜೊತೆಗೆ ಅಮೆರಿಕದ ಸೇನಾ ಶಕ್ತಿಯನ್ನು ಟ್ರಂಪ್ ಶ್ಲಾಘಿಸಿದ್ದಾರೆ. ಸಂಧಾನ ವಿಫಲವಾದರೆ ಇರಾನ್ ಸೇನಾತ್ಮಕವಾಗಿ ಎದುರಿಸುವ ಸಾಮರ್ಥ್ಯ ಹೊಂದಿಲ್ಲ ಎಂಬುದು ಟ್ರಂಪ್ ಅವರ ವಾದವಾಗಿದೆ.

ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಮಾತುಕತೆಯ ನೇತೃತ್ವ ವಹಿಸುತ್ತಿದ್ದಾರೆ. ಪ್ಯಾರಿಸ್‌ನಿಂದ ಪ್ರಯಾಣ ಬೆಳೆಸುವ ಮುನ್ನ ಮಾತನಾಡಿದ ಅವರು, “ಇರಾನ್ ನಮ್ಮ ಜೊತೆ ಆಟವಾಡಲು ಯತ್ನಿಸಿದರೆ, ಸಂಧಾನಕಾರರು ಅಷ್ಟು ಸುಲಭವಾಗಿ ಸ್ಪಂದಿಸುವುದಿಲ್ಲ ಎಂಬುದು ಅವರಿಗೆ ಅರಿವಿರಲಿ” ಎಂದು ಎಚ್ಚರಿಸಿದ್ದಾರೆ. ಇತ್ತ ಇರಾನ್‌ನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಮತ್ತು ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗ ಇಂದು ಮುಂಜಾನೆ ಇಸ್ಲಾಮಾಬಾದ್‌ಗೆ ತಲುಪಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಮತ್ತು ಸಚಿವ ಇಶಾಕ್ ದಾರ್ ಅವರು ಈ ನಿಯೋಗವನ್ನು ಸ್ವಾಗತಿಸಿದ್ದಾರೆ.
ಮಾತುಕತೆಯ ಹಾದಿಯಲ್ಲಿರುವ ಅಡೆತಡೆಗಳು
ಎರಡೂ ದೇಶಗಳು ತಮ್ಮದೇ ಆದ ಷರತ್ತುಗಳನ್ನು ಮುಂದಿಟ್ಟಿವೆ. ಅಮೆರಿಕವು ಇರಾನ್ ತನ್ನ ಯುರೇನಿಯಂ ಸಮೃದ್ಧಗೊಳಿಸುವಿಕೆಯನ್ನು ನಿಲ್ಲಿಸಬೇಕು ಮತ್ತು ಸೇನಾ ಮಿತಿಯನ್ನು ಒಪ್ಪಿಕೊಳ್ಳಬೇಕು ಎಂಬ 15 ಅಂಶಗಳ ಚೌಕಟ್ಟನ್ನು ಸಿದ್ಧಪಡಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ 10 ಅಂಶಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಹೊರ್ಮುಜ್ ಜಲಸಂಧಿಯ ಮೇಲೆ ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಬೇಕು ಮತ್ತು ಯುದ್ಧದ ಹಾನಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ.
ಕಳೆದ ಎರಡು ವಾರಗಳಿಂದ ಜಾರಿಯಲ್ಲಿರುವ ದುರ್ಬಲ ಕದನ ವಿರಾಮವು ಪ್ರಸ್ತುತ ಶಾಂತಿಯನ್ನು ಕಾಪಾಡಿದ್ದರೂ, ಅಮೆರಿಕವು ಮಧ್ಯಪ್ರಾಚ್ಯದಲ್ಲಿ ತನ್ನ ಸೇನಾ ನಿಯೋಜನೆಯನ್ನು ಹೆಚ್ಚಿಸಿರುವುದು ಮಾತುಕತೆಯ ಫಲಿತಾಂಶದ ಬಗ್ಗೆ ಕುತೂಹಲ ಮೂಡಿಸಿದೆ. ಒಂದು ವೇಳೆ ಈ ಸಂಧಾನ ಯಶಸ್ಸಾದರೆ, ಮುಂದಿನ ವಾರ ಇಸ್ರೇಲ್ ಮತ್ತು ಲೆಬನಾನ್ ನಡುವೆ ನಡೆಯಲಿರುವ ಮಾತುಕತೆಯ ಹಾದಿಯೂ ಸುಗಮವಾಗಲಿದೆ.
ಇದನ್ನೂ ಓದಿ: ಹೊರ್ಮುಜ್ ಜಲಸಂಧಿಯಲ್ಲಿ ಹೂತಿಟ್ಟ ಸ್ಫೋಟಕಗಳ ನಿಖರ ಸ್ಥಳ ಗೊತ್ತಾಗದೆ ಪೇಚಿಗೆ ಸಿಲುಕಿದ ಇರಾನ್!


















