ಕೊಪ್ಪಳ: ಹಿಂದುತ್ವ – ಹಿಂದುತ್ವ ಎಂದು ಮಾತನಾಡುತ್ತಾರಲ್ಲ, ಅವರಿಗೆ ಏನು ಗೊತ್ತು ಬದನೆಕಾಯಿ. ಹಿಂದುತ್ವ ಎನ್ನುವವರು ಮುಕ್ಕೊಂಡು ಇರಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೋಮವಾರ (ಜು.07) ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಬಂಗಾರಪ್ಪ ಅವರು ಹಳ್ಳಿಗಳಲ್ಲಿ ದೇವಸ್ಥಾನಕ್ಕೆ ಆರ್ಥಿಕ ಬಲಕ್ಕಾಗಿ ಆರಾಧನಾ ಯೋಜನೆ ತಂದಿದ್ದರು. ಈಗ ಅಜೀಂ ಪ್ರೇಮಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಅವರು ಯಾರೂ ಜಾತಿ ಮಾಡಿಲ್ಲ. ಎಲ್ಲ ಮಕ್ಕಳಿಗೂ ತತ್ತಿ, ಬಾಳೆಹಣ್ಣು ಕೊಡಲು ಒಪ್ಪಿ ಹಣ ಕೊಟ್ಟಿದ್ದಾರೆ. ಗ್ಯಾರಂಟಿಯಿಂದ ಪುರುಷರಿಗೆ ಯಾವುದೇ ಬೇಸರ ಇಲ್ಲ. ಅವರು ಬೇಸರ ಮಾಡಿಕೊಂಡಿಲ್ಲ ಎಂದರು.
ನಮ್ಮ ಸರ್ಕಾರ ಬಡತನ ನಿವಾರಣೆಗೆ ಗ್ಯಾರಂಟಿ ಯೋಜನೆ ನೀಡಿದೆ. ನನ್ನ ಬಗ್ಗೆ ಟೀಕೆ ಟಿಪ್ಪಣಿಗಳನ್ನು ನಾನು ತಲೆ ಕೆಡಿಸಿಕೊಂಡಿಲ್ಲ. ನನ್ನ ಹೇರ್ ಸ್ಟೈಲ್ ಇರುವುದೇ ಹೀಗೆ ನನ್ನ ಬಗ್ಗೆ ಟೀಕೆ ಮಾಡುವವರು ಟೀಕೆ ಮಾಡಲಿ. ನನ್ನ ಹೇರ್ ಸ್ಟೈಲ್ ಮಕ್ಕಳು ಮಾಡಿಕೊಳ್ಳುತ್ತಾರೆ ಎಂದೆಲ್ಲಾ ಟೀಕೆ ಮಾಡಿದ್ದರು. ಆದರೆ ವಿದ್ಯಾರ್ಥಿಗಳು 12 ತರಗತಿ ನಂತರ ಹೇರ್ ಸ್ಟೈಲ್ ಮಾಡಿಕೊಳ್ಳಲಿ. ಈಗ ನನ್ನಂತೆ ಹೇರ್ ಸ್ಟೈಲ್ ಬೇಡ ಎಂದರು.
ನಾನು ಬಿಜೆಪಿಯ ಟೀಕೆಗೆ ಬಗ್ಗುವುದಿಲ್ಲ. ನಮ್ಮ ಸರ್ಕಾರ 11 ತಿಂಗಳಲ್ಲಿ 12,500 ಶಿಕ್ಷಕರ ನೇಮಕಾತಿ ಮಾಡಿದೆ ಎಂದರು.