ದಾವಣಗೆರೆ: ಜಾತಿ ಗಣತಿ ವಿಚಾರದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರ ಎರಡು ಸಮುದಾಯಗಳ ಪ್ರಶ್ನೆಯ ವಿಚಾರ ಅಲ್ಲ. ಬಹುತೇಕ ಸಮಾಜದವರಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಹತ್ತ ವರ್ಷಗಳ ಹಿಂದಿನ ವರದಿ ಇದು. ಇನ್ನೊಮ್ಮೆ ಜಾತಿ ಸಮೀಕ್ಷೆ ಮಾಡುವುದು ಸೂಕ್ತ ಎಂದು ದಾವಣಗೆರೆಯಲ್ಲಿ ಸಾಣಿಹಳ್ಳಿ ಮಠದ ಡಾ. ಪಂಡಿತಾರಾಧ್ಯ ಸ್ಬಾಮೀಜಿ ಹೇಳಿದ್ದಾರೆ.
ಈಗಾಗಲೇ ಬಹುತೇಕ ಕಡೆಯಿಂದ ಈ ವರದಿ ಬಗ್ಗೆ ವಿರೋಧ ವ್ಯಕ್ತವಾಗಿದೆ. ಈ ಜಾತಿಯ ವರದಿಯಲ್ಲಿ ಲಿಂಗಾಯತ ಸಂಖ್ಯೆಯೇ ಕಡಿಮೆ ಇದೆ. ಇನ್ನೊಂದು ವರ್ಗದ ಸಂಖ್ಯೆ ಹೆಚ್ಚಿಗೆ ಇದೆ. ಹೀಗಾಗಿ ಹತ್ತು ವರ್ಷದ ಹಿಂದಿನ ಜಾತಿ ಗಣತಿ ವರದಿ ಸ್ವೀಕರಿಸುವುದು ಬೇಡ. ಇನ್ನೊಮ್ಮೆ ವೈಜ್ಞಾನಿಕ ವರದಿ ನಡೆಸಿ. ಮೇಲಾಗಿ ಈ ಜಾತಿ ವರದಿಗೆ ಆಡಳಿತ ಪಕ್ಷದ ಸಚಿವ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದನ್ನು ಕೈ ಬಿಡಬೇಕು ಎಂದು ಸಲಹೆ ನೀಡಿದ್ದಾರೆ.