ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಎಂಬಾತನನ್ನು ನಿನ್ನೆ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈಗಾಗಲೇ ನಾವು ಆಕ್ಷನ್ ತೆಗೆದುಕೊಂಡಿದ್ದೇವೆ. ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈ ರೀತಿ ಘಟನೆ ನಡೆಯಲು ಬಿಡುವುದಿಲ್ಲ. ಮಂಗಳೂರು ಜನರು ಶಾಂತಿಯಿಂದ ವರ್ತಿಸಬೇಕು. ಸರ್ಕಾರ ನಿಮ್ಮ ಜೊತೆ ಇರಲಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರಿಗೆ ತಿಳಿಸಿದ್ದೇವೆ. ತನಿಖೆ ಮುಂದುವರೆದಿದೆ ಯಾರೇ ಆಗಿದ್ದರೂ ಕಠಿಣ ಕ್ರಮ ಆಗಲಿದೆ. ಈ ಯಾವುದೇ ಕಾರಣಕ್ಕೂ ಈ ಘಟನೆಯನ್ನು ಬೆಳೆಯಲು ಬಿಡುವುದಿಲ್ಲ. ಆರೋಪಿಗಳು ಯಾವುದೇ ಪಕ್ಷದವರಾಗಿದ್ದರೂ ಬಿಡುವುದಿಲ್ಲ. ಯಾರೇ ಆಗಿದ್ದರೂ ಕಠಿಣ ಕ್ರಮ ಆಗಲಿದೆ ಎಂದಿದ್ದಾರೆ.
ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರೇ ಆದರೂ ಕ್ರಮ ಆಗಲಿದೆ. ಹಿಂದೆಯೂ ಕಠಿಣ ಕ್ರಮ ಆಗಿದೆ. ಈಗಲೂ ಕೂಡ ಅದು ಆಗುತ್ತದೆ. ಕಾಂಗ್ರೆಸ್ ನಲ್ಲಿ ಹಿಂದುಗಳು ಇಲ್ವಾ? ನಾವ್ಯಾರು ಹಿಂದುಗಳು ಅಲ್ವಾ? ಇದಕ್ಕೆ ಈ ರೀತಿ ವಿಶ್ಲೇಷಣೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಯಾವುದೇ ಅಹಿತಕರ ಘಟನೆ ಈ ಕಾರಣಕ್ಕೆ ಆಗಬಾರದು. ಹಾಗಾಗಿ ಎಕ್ಸ್ಟಾ ಕೇರ್ ತೆಗೆದುಕೊಂಡಿದ್ದೇವೆ. ಈಗಾಗಲೇ ವರದಿ ಕೇಳಿದ್ದೇನೆ. ಈ ಪಕ್ಷ ಆ ಪಕ್ಷ ಅಂತ ಏನಿಲ್ಲ. ಶಾಂತಿ ಕಾಪಾಡಲು ಕ್ರಮ ವಹಿಸುತ್ತೇವೆ. ನಾವು ಕೊಲೆ ಆಗಬೇಕು ಅಂತ ಬಯಸಲ್ಲ. ಯಾವುದೇ ಸರ್ಕಾರ ಆದರೂ ಶಾಂತಿ ಕಾಪಾಡಲಿ ಅನ್ನುತ್ತದೆ. ಆ ಜವಬ್ದಾರಿಯಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಶೀಘ್ರವಾಗಿ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು ಎಂದಿದ್ದಾರೆ.


















