ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಒಂದೆಡೆ ಪವರ್ ಶೇರಿಂಗ್ ಗುದ್ದಾಟ ಇನ್ನೊಂದೆಡೆ ಮಂತ್ರಿಗಿರಿ ಫೈಟ್ ಶುರುವಾಗಿದೆ. ಎರಡು ಸಮಸ್ಯೆ ಹೈಕಮಾಂಡ್ ಅಂಗಳಕ್ಕೆ ಜಾರಿದ್ದು, ಈ ಬಗ್ಗೆ ಸಿಎಂ ಸಿದ್ದು ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ಸುಮಾರು 30ಕ್ಕೂ ಅಧಿಕ ಶಾಸಕರು, ನಮಗೆ ಸಚಿವ ಸ್ಥಾನ ಬೇಕು ಅಂತಾ ದೆಹಲಿ ಟೂರ್ ಗೆ ಹೋಗಿದ್ದಾರೆ. ಎರಡಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಸುಮಾರು 30 ಶಾಸಕರು ಮಂತ್ರಿಗಿರಿ ಹಕ್ಕೊತ್ತಾಯಕ್ಕಾಗಿ ದೆಹಲಿಗೆ ಹೋಗಿದ್ದಾರೆ. ಎಲ್ಲಾ ಶಾಸಕರು ಎರಡು ದಿನ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದು, ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲಿದ್ದಾರೆ.
ಈ ಬಗ್ಗ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ, ಶಾಸಕರು ದೆಹಲಿಗೆ ಹೋಗಿರುವುದರಲ್ಲಿ ತಪ್ಪಿಲ್ಲ. ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡಬೇಕಿತ್ತು. ಪಂಚ ರಾಜ್ಯಗಳ ಚುನಾವಣೆ, ಬೈಎಲೆಕ್ಷನ್‌ನಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ದೆಹಲಿಗೆ ಹೋಗಿರುವ ಶಾಸಕರ ನಡೆಯನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕಾರ : ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ



















