ಬೆಂಗಳೂರು: ಮೈಸೂರು ರಾಜ ಮನೆತನದ ಪ್ರಮೋದಾದೇವಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಾವು ಯಾರ ವಿರುದ್ದವೂ ದ್ವೇಷ ಮಾಡುವುದಿಲ್ಲ. ಮುಂದಿನ ರಾಜ್ಯದ ಅಬಿವೃದ್ಧಿ ದೃಷ್ಟಿಯಿಂದ ಈ ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.
ಟಿಡಿಆರ್ ನ್ನು ಈ ಪ್ರಮಾಣದಲ್ಲಿ ಕೊಡ್ತೀವಿ ಅಂತಾ ಹೇಳಿದ್ವಾ? ಎಂದು ಪ್ರಶ್ನಿಸಿರುವ ಅವರು ನಾವು ಜನರಿಗೋಸ್ಕರ ರಸ್ತೆ ಅಗಲೀಕರಣಕ್ಕೆ ಮುಂದಾಗಿರುವುದು. ಆದರೆ, ಯದ್ವಾ ತದ್ವ ಟಿಡಿಆರ್ ಹಾಕಿದ್ರೆ ಸರ್ಕಾರಕ್ಕೆ ಹೊರೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇಲ್ಲಿ ದ್ವೇಷ ಸಾಧಿಸುವ ಪ್ರಶ್ನೆಯ ಇಲ್ಲ. ನಾವು ಯಾರ ಮೇಲೆಯೂ ದ್ವೇಷ ಸಾಧಿಸುವುದಿಲ್ಲ. ನಾವು ಟಿಡಿಆರ್ ಕೊಟ್ಟರೆ ರಾಜ್ಯದ ಪ್ರಗತಿಗೆ ತೊಂದರೆಯಾಗುತ್ತದೆ. ಹೀಗಾಗಿ ಆ ತಪ್ಪು ಮಾಡುವುದಿಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಮೈಸೂರು ರಾಜ ಮನೆತನದ ಮಧ್ಯೆ ಬೆಂಗಳೂರು ಅರಮನೆ ಮೈದಾನದ ಭೂ ವಿವಾದ ತಾರಕಕ್ಕೇರುತ್ತಿದೆ. ಆ ಭೂಮಿಗೆ ಟಿಡಿಆರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸಮರಕ್ಕೆ ಸಿದ್ಧ ಎಂದು ನಿನ್ನೆಯಷ್ಟೇ ಪ್ರಮೋದಾದೇವಿ ಒಡೆಯರ್ ಹೇಳಿದ್ದರು.
ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಚಿವ ಸಂಪುಟ ಸಭೆ ಕರೆದು ಚರ್ಚೆ ನಡೆಸಿದ್ದರು. ಈ ಸಂಪುಟ ಸಭೆಯಲ್ಲಿ ರಸ್ತೆ ಅಗಲೀಕರಣಕ್ಕೆ ಬೆಂಗಳೂರಿನ ಅರಮನೆಯ ಜಾಗವನ್ನು ಬಳಸಿಕೊಳ್ಳುವ ಕುರಿತು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿತ್ತು.
ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರು ಅರಮನೆ ರಸ್ತೆ ಅಗಲೀಕರಣ ಯೋಜನೆ ವಿಚಾರವಾಗಿ ಟಿಡಿಆರ್ ವಿಸ್ತರಣೆಗೆ ಸಂಪುಟ ನಿರಾಕರಿಸಿದೆ. ಹೀಗಾಗಿ ಪ್ರಮೋದಾದೇವಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದಿದ್ದಾರೆ.
1996ರಲ್ಲಿನ ಅಕ್ವಿಜೇಶನ್ ಆ್ಯಂಡ್ ಸ್ಟೇ ಆರ್ಡರ್ ಕೂಡ ನಮ್ಮ ಬಳಿಯಿದೆ. ಸುಪ್ರೀಂ ಕೋರ್ಟ್ ಕೂಡ ಬೆಂಗಳೂರು ಅರಮನೆ ಜಾಗದ ಬಗ್ಗೆ ಹೇಳಿದೆ. ಸರ್ಕಾರ ಸ್ಟೇ ಇಲ್ಲ ಅಂದಿದೆ. ಆದರೆ ಸ್ಟೇ ಇದೆ ಹಾಗೂ ಮಾಲೀಕತ್ವ ಇದೆ. ಈಗಲೂ ನಾವೇ ಬೆಂಗಳೂರು ಅರಮನೆ ಜಾಗದ ಓನರ್ ಆಗಿದ್ದೇವೆ ಎಂದಿದ್ದಾರೆ.