ವಿಜಯಪುರ: ನಾನು ಯಾವುದೇ ಹೊಸ ಪಕ್ಷ ಕಟ್ಟಿಲ್ಲ. ಕಟ್ಟುವುದೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹಾಗೂ ಬಿಜೆಪಿ ಮೇಲೆ ವಿಶ್ವಾಸವಿದೆ. ನನಗೆ ಯಡಿಯೂರಪ್ಪ, ವಿಜಯೇಂದ್ರ ಮೇಲೆ ವಿಶ್ವಾಸವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಗೆ ಯತ್ನಾಳ್ ಏನು? ವಿಜಯೇಂದ್ರ ಏನು? ಎಂಬುವುದು ಗೊತ್ತಾಗಿದೆ. ಯತ್ನಾಳ್ ರನ್ನು ಹೊರ ಹಾಕಲು ಆಗುವುದಿಲ್ಲ ಎನ್ನವುದೂ ಗೊತ್ತಾಗಿದೆ. ನಾವು ಯಾವುದೇ ಹೊಸ ಪಕ್ಷ ಕಟ್ಟುವುದಿಲ್ಲ. ನಮ್ಮ ಬಿಜೆಪಿಯನ್ನೇ ರಿಪೇರಿ ಮಾಡುತ್ತೇವೆ. ಹಿಂದುತ್ವದಿಂದ ದೂರ ಸರಿದಿರುವ ನಮ್ಮ ನಮ್ಮ ಪಕ್ಷವನ್ನು ಹಿಂದುತ್ವದತ್ತ ತರುತ್ತೇವೆ ಎಂದಿದ್ದಾರೆ.
ಹಿಂದುತ್ವದ ನಾಯಕನನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ. ಮಹಾರಾಷ್ಟ್ರ, ಉತ್ತರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ರಾಜ್ಯಗಳಲ್ಲಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬರಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಹಿಂದುತ್ವದ ಆಧಾರದ ಮೇಲೆ ಬರಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ವಿಚಾರವಾಗಿ ಸ್ವ ಪಕ್ಷೀಯರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು. ಹಿಂದುಗಳಿಗೆ ಇವರು ಏನು ಮಾಡಲಿಲ್ಲ. ಹಿಂದೂಗಳ ಮೇಲೆ ಹಲ್ಲೆ ಆದಾಗ ಕಠಿಣ ಕ್ರಮ ಎಂದು ಮಾತ್ರ ಮಾತನಾಡಿದರು. ಶಿವಮೊಗ್ಗದಲ್ಲಿ ಔರಂಗಜೇಬ್ ಕಟೌಟ್ ಹಾಕಿದಾಗ ಕೆಜೆ ಹಳ್ಳಿ ಗಲಾಟೆಯಾದಾಗ ಹಾಗೂ ಇತರೆ ಘಟನೆಗಳಾದಾಗ ಹಿಂದೂಗಳ ಕಾಳಜಿ ವಹಿಸಲಿಲ್ಲ. ಹೀಗಾಗಿ ಹಿಂದೂ ಕಾರ್ಯಕರ್ತರು ಬೇಜಾರಾಗಿ ಮನೆಯಲ್ಲಿ ಕುಳಿತರು. ಹೀಗಾಗಿಯೇ ಬಿಜೆಪಿಗೆ ಸೋಲಾಯಿತು ಎಂದು ಆರೋಪಿಸಿದ್ದಾರೆ.
ಬಿಜೆಪಿಯಿಂದ ಮಾತ್ರ ಹಿಂದೂಗಳಿಗೆ ರಕ್ಷಣೆ ಸಿಗುವುದಕ್ಕೆ ಸಾಧ್ಯ. ಬಿಜೆಪಿ ಶಕ್ತಿಯುತವಾಗಬೇಕಾದರೆ ಹಿಂದುತ್ವದ ನಾಯಕತ್ವ ಬೇಕು. ನಾನೇ ಹಿಂದೂತ್ವದ ನಾಯಕನೆಂಬ ಅಹಂಕಾರವಿಲ್ಲ. ಯಾರೇ ರಾಜ್ಯಾಧ್ಯಕ್ಷರಾಗಲಿ ಹಿಂದೂಪರ ಗಟ್ಟಿಯಾಗಿ ಮಾತನಾಡುವವರಾಗಲಿ. ಚುನಾವಣೆಯಲ್ಲಿ ಮಾತ್ರ ತೀವ್ರವಾಗಿ ಖಂಡನೆ ಎಂದು ಮಾತನಾಡುವ ಅಯೋಗ್ಯರು ಬೇಡ. ಅಂಥವರನ್ನು ಮುಂದುವರೆಸುವುದಿಲ್ಲ. ಮುಂದುವರೆಸಿದರೆ, 30 ಸ್ಥಾನಗಳು ಮಾತ್ರ ಬರುತ್ತವೆ ಎನ್ನುವುದು ಹೈಕಮಾಂಡ್ ಗೆ ಗೊತ್ತಾಗಿದೆ ಎಂದು ಹೇಳುವ ಮೂಲಕ ಮತ್ತೊಮ್ಮ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಲೇಬೇಕು. ಬದಲಾವಣೆ ಆಗಿಯೇ ಆಗುತ್ತದೆ. ವೀರಶೈವ- ಲಿಂಗಾಯತ ನಾಯಕರಂದರೇ ಪೂಜ್ಯ ತಂದೆಯವರು. ಪೂಜ್ಯ ತಂದೆಯವರ ಮಗನನ್ನು ತೆಗೆದುಬಿಟ್ಟರೆ ಬಿಜೆಪಿ ಮುಗಿದು ಹೋಗುತ್ತದೆ ಎಂದು ಹವಾ ಎಬ್ಬಿಸಿದ್ದರು ಎಂದು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಂಗ್ಯವಾಡಿದ್ದಾರೆ.
ಬಿಜೆಪಿ ಹಿಂದುತ್ವದ್ದಾಗಿದೆ. ಲಿಂಗಾಯತ ವೀರಶೈವ ಹಿಂದುತ್ವದ ಭಾಗ. ಲಿಂಗಾಯತರು ಹಿಂದುತ್ವ ಬಿಟ್ಟು ಇಲ್ಲ. ಈಗ ಸಮಸ್ತ ಹಿಂದುಗಳ ರಕ್ಷಣೆ ಮಾಡುವ ನಾಯಕ ಬೇಕಾಗಿದೆ. ಕೇವಲ ಲಿಂಗಾಯತ ಎಂದು ಸೀಮಿತವಾದರೆ ನೀವು ಅಲ್ಲೇ ಕೂಡುತ್ತಿರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದುತ್ವ ಭಗವಾ ಧ್ವಜವೇ ಪ್ರಾಣ ರಕ್ಷಣೆ ಮಾಡುತ್ತದೆ ಎಂದಿರುವ ಅವರು ವಿಜಯಪುರ ಜಿಲ್ಲಾಧ್ಯಕ್ಷ ಆಯ್ಕೆ ವಿಚಾರದಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಆಪ್ತ ಗುರುಲಿಂಗಪ್ಪ ಅಂಗಡಿ ನೇಮಕಕ್ಕೆ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ವಿಜಯೇಂದ್ರ ಏನು ಬೇಕಾದರೂ ಮಾಡಿಕೊಳ್ಳಲಿ. ಅವರಪ್ಪನೂ ಹೀಗೆ ಮಾಡುತ್ತಾ ಬಂದ. ನಮ್ಮ ವಿರುದ್ಧ ಇದ್ದವರ ನೇಮಕ ಮಾಡುವ ಚಟ ಅವರಿಗಿದೆ. ವಿಜಯೇಂದ್ರ ವಿಜಯಪುರಕ್ಕಾದರೂ ಬರಲಿ ನೋಡ್ತೇನಿ ಎಂದು ಹೇಳಿದ್ದಾರೆ.