ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್ (Darshan) ಅವರನ್ನ ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ಕುರಿತು ನಟ ಕಿಚ್ಚ ಸುದೀಪ್ (Kichcha Sudeep) ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾನ್ ಮಾಡಲು ನಾವೇನು ಕಾನೂನು ಅಲ್ಲ. ಕೇಸ್ನಿಂದ ಹೊರಗೆ ಬಂದ್ರೆ ಬ್ಯಾನ್ ಎಂಬುವುದು ಇರುವುದಿಲ್ಲ. ಇಲ್ಲಿ ಬ್ಯಾನ್ ಅನ್ನುವುದಕ್ಕಿಂತಲೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುವುದು ಮುಖ್ಯ. ಕೆಲ ವಾರಗಳ ಹಿಂದೆಯಷ್ಟೇ ನನ್ನ ಮೇಲೂ ಬ್ಯಾನ್ ಎಂಬ ಕೂಗು ಕೇಳಿಬಂದಿತ್ತು. ಹಾಗಾಗಿ ಬ್ಯಾನ್ ಮಾಡೋದು ಮುಖ್ಯ ಅಲ್ಲ. ನ್ಯಾಯ ಅನ್ನೋದು ಮುಖ್ಯ ಎಂದು ಹೇಳಿದ್ದಾರೆ.
ಇಂತಹ ವಿಚಾರದಲ್ಲಿ ಪರ ವಿರೋಧ ಮಾತನಾಡುವುದು ತಪ್ಪಾಗುತ್ತದೆ. ಮುಖ್ಯವಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ, ಮಗುವಿಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾದ ರೇಣುಕಾಸ್ವಾಮಿ ಅವರಿಗೆ, ಮುಂದೆ ಹುಟ್ಟುವ ಅವರ ಮಗುವಿಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.
